ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಆಯ್ಕೆಯಾಗಿದ್ದಾರೆ. ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಶಾಸಕಾಂಗ ಸಭೆಯಲ್ಲಿ ಸಚಿವೆ ಅತಿಶಿ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಿದ್ದು, ಪಕ್ಷದ ಶಾಸಕರು ಅತಿಶಿ ಆಯ್ಕೆಯನ್ನು ಅನುಮೋದಿಸಿದ್ದಾರೆ. ಇಂದು (ಮಂಗಳವಾರ) ಸಂಜೆ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಎರಡು ದಿನಗಳ ಹಿಂದೆ ತಮ್ಮ ಸಿಎಂ ಪದವಿಗೆ ರಾಜೀನಾಮೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಆಪಾದಿತ ದೆಹಲಿ ಅಬಕಾರಿ ಹಗರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ತಿಹಾರ್ ಜೈಲಿನಿಂದ ಬಂದ ಬಳಿಕ ಮುಖ್ಯಮಂತ್ರಿ ಹುದ್ದೆ ತ್ಯಜಿಸಲು ನಿರ್ಧರಿಸಿದ್ದರು.
ಭಾನುವಾರ, ಪಕ್ಷದ ಸಭೆಯ ನಂತರ ಮಾತನಾಡಿದ್ದ ಅವರು, ಎಎಪಿ ಭವಿಷ್ಯವು ಈಗ ದೆಹಲಿ ಜನತೆ ಕೈಯಲ್ಲಿದೆ. ಬಿಜೆಪಿ ಸರ್ಕಾರದ ಆಡಳಿತ ಆಂಗ್ಲರ ಕಾನೂನಿಗಿಂತ ಕೆಟ್ಟದಾಗಿದೆ. ಜನರ ತೀರ್ಪು ನೀಡುವವರೆಗೂ ನಾನು ವಿರಮಿಸುವುದಿಲ್ಲ. ನಮ್ಮ ಬಂಡೆಯಂತಹ ಸಂಕಲ್ಪವನ್ನು ಕೇಂದ್ರ ಸರ್ಕಾರದ ಪಿತೂರಿಗಳಿಂದ ಮುರಿಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?
ದೆಹಲಿಯ ಪ್ರತಿ ಮನೆ ಪ್ರತಿ ಬೀದಿಗೂ ತೆರಳುವೆ. ಜನರಿಂದ ತೀರ್ಪು ಸ್ವೀಕರಿಸುವವರೆಗೂ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನು ಜೈಲಿನಲ್ಲಿದ್ದಾಗ ಸ್ವತಂತ್ರ ದಿನಾಚರಣೆ ಸಂದರ್ಭದಲ್ಲಿ ಸಚಿವೆ ಅತಿಶಿ ಅವರಿಂದ ಧ್ವಜಾರೋಹಣ ಮಾಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದೆ.ಆದರೆ ಪತ್ರವು ಯಾವುದೇ ಉತ್ತರವಿಲ್ಲದೆ ವಾಪಸ್ ಬಂದಿತು. ಇನ್ನೊಮ್ಮೆ ಪತ್ರ ಬರೆದರೆ ನಿಮ್ಮ ಕುಟುಂಬದವರನ್ನು ಭೇಟಿ ಮಾಡಿಸಲು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಜೈಲಿಗೋದರೂ ರಾಜೀನಾಮೆ ನೀಡಿರಲಿಲ್ಲ.ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳ ಸಿಎಂ ಪಿಣರಾಯಿ ವಿಜಯನ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧವು ಪ್ರಕರಣಗಳನ್ನು ದಾಖಲಿಸಲಾಗಿದೆ. ನಾನು ಬಿಜೆಪಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಿಮ್ಮ ಮೇಲೆ ಪ್ರಕರಣ ದಾಖಲಾದರೂ ರಾಜೀನಾಮೆ ನೀಡಬೇಡಿ. ಇದು ಬಿಜೆಪಿಯ ಹೊಸ ಆಟವಾಗಿದೆ ಎಂದು ತಿಳಿಸಿದ್ದರು.
ದೆಹಲಿ ವಿಧಾನಸಭೆ ಚುನಾವಣೆ 2025ರ ಫೆಬ್ರವರಿಯಲ್ಲಿ ನಡೆಯಲಿದೆ.
