ಮತ್ತೊಂದು ಸಮುದಾಯದ ಯುವಕನೊಂದಿಗೆ ಕುಳಿತಿದ್ದ ಯುವತಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಆಕೆಯ ಬುರ್ಖಾವನ್ನು ಕಿತ್ತು ಹಾಕಿರುವ ಘಟನೆ ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ನಡೆದಿದೆ. ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಆರೋಪಿಗಳನ್ನು ಕುಂಟುವಂತೆ ಮಾಡಿ, ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಜಫರ್‌ನಗರದ ಖಲಾಪರ್ ಪ್ರದೇಶದ ಹಣಕಾಸು ಕಂಪನಿಯಲ್ಲಿ ಕಂತು ಸಂಗ್ರಹಕಾರರಾಗಿ ಕೆಲಸ ಮಾಡುವ ಮಹಿಳೆ ದೂರು ದಾಖಲಿಸಿದ್ದಾರೆ. ಅವರು ತಮ್ಮ ಮಗಳನ್ನು ತನ್ನ ಸಹೋದ್ಯೋಗಿ ಯುವಕನೊಂದಿಗೆ ಸುಜ್ರು ಗ್ರಾಮಕ್ಕೆ ಕಳಿಸಿದ್ದರು. ಅವರು ಖಲಾಪರ್ ಪ್ರದೇಶದ ದರ್ಜಿ ಬೀದಿಯಲ್ಲಿ ಹಾದುಹೋಗುತ್ತಿದ್ದಾಗ ಆರೋಪಿಗಳ ಗುಂಪು ಅವರನ್ನು ಅಡ್ಡಗಟ್ಟಿದೆ. ಇಬ್ಬರ ಧಾರ್ಮಿಕ ಹಿನ್ನೆಲೆಯನ್ನು ವಿಚಾರಿಸಿ ಹಲ್ಲೆ ಮಾಡಿದೆ. ಅಲ್ಲದೆ, ಯುವತಿಯ ಬುರ್ಖಾ ಅವರನ್ನು ಕಿತ್ತು ಹಾಕಿ, ದಾಂಧಲೆ ನಡೆಸಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಮತ್ತು ಆಕೆಯ ತಾಯಿ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ. ವಿಡಿಯೋದಲ್ಲಿ ಆರೋಪಿಗಳನ್ನು ಗುರುತಿಸಿದ್ದು, ತಕ್ಷಣ ಬಂಧಿಸಿದ್ದಾರೆ.
A shocking incident surfaced from #UttarPradesh's #Muzaffarnagar on Saturday, where six men allegedly attacked a #Muslim girl and a #Hindu boy. A video of the incident surfaced online. The six accused were then arrested by the police. Meanwhile, another video of the six men… pic.twitter.com/YTQUO0xJNH
— Hate Detector 🔍 (@HateDetectors) April 14, 2025
ಬಂಧಿತ ಆರೋಪಿಗಳನ್ನು ಮುಜಫರ್‌ನಗರ ನಿವಾಸಿಗಳಾದ ಸರ್ತಾಜ್, ಶಾದಾಬ್, ಮೊಹಮ್ಮದ್ ಉಮರ್, ಅರ್ಶ್, ಶೋಯೆಬ್ ಮತ್ತು ಶಮಿ ಎಂದು ಹೆಸರಿಸಲಾಗಿದೆ. ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 115(2), 352, 191(2) ಹಾಗೂ 74ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
“ಮುಜಫರ್‌ನಗರದ ಖಲಾಪರ್ ಪ್ರದೇಶದ ಯುವತಿ ಮತ್ತು ಓರ್ವ ಯುವಕ ಸುಜ್ರು ಗ್ರಾಮದಲ್ಲಿ ಹಣ ಸಂಗ್ರಹಿಸಲು ತೆರಳುತ್ತಿದ್ದರು. ಈ ವೇಳೆ, ಖಲಾಪರ್‌ನಲ್ಲಿ ಗುಂಪೊಂದು ಅವರನ್ನು ತಡೆದು, ಹಲ್ಲೆ ನಡೆಸಿದೆ. ಕಿರುಚುತ್ತಾ ಸ್ಥಳದಿಂದ ತೆರಳಲು ಯತ್ನಿಸಿದ ಯುವತಿಯ ಬುರ್ಖಾವನ್ನು ಎಳೆದು, ಕಿತ್ತು ಹಾಕಲು ಯತ್ನಿಸಿದೆ. ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಿ, ಬಂಧಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.