ಸ್ತನಗಳನ್ನು ಮುಟ್ಟುವ ಪ್ರಯತ್ನ ‘ತೀವ್ರ ಲೈಂಗಿಕ ದೌರ್ಜನ್ಯ’ ಆಗುತ್ತದೆ, ಅದು ಅತ್ಯಾಚಾರವಾಗಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಹೇಳಿದೆ. ಹಾಗೆಯೇ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ್ದ ಪಶ್ಚಿಮ ಬಂಗಾಳದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಇನ್ನು ಈ ಹಿಂದೆ ಅಲಹಾಬಾದ್ ಹೈಕೋರ್ಟ್, ಪ್ರಕರಣವೊಂದರ ತನಿಖೆ ವೇಳೆ ಸ್ತನ ಮುಟ್ಟುವುದು, ಪೈಜಾಮಾದ ಲಾಡಿ ಎಳೆಯುವುದು ಅತ್ಯಾಚಾರದ ಯತ್ನವಲ್ಲ ಎಂದು ಹೇಳಿತ್ತು. ಹೈಕೋರ್ಟ್‌ನ ಈ ತೀರ್ಪಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಲಾಡಿ ಎಳೆಯುವುದು ಅತ್ಯಾಚಾರದ ಯತ್ನ ಅಲ್ಲವೆಂದಾದರೆ ಇನ್ನು ಏನು ಮಾಡಿದರೆ ಅತ್ಯಾಚಾರ ಯತ್ನವೆಂದು ಪರಿಗಣಿಸಲಾಗುತ್ತದೆ ಎಂದು ಪ್ರಶ್ನಿಸಲಾಗಿತ್ತು. ಸದ್ಯ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ.
ಇದನ್ನು ಓದಿದ್ದೀರಾ? ‘ಸ್ತನ ಮುಟ್ಟುವುದು ಅತ್ಯಾಚಾರವಲ್ಲ’ವೆಂಬ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
ಪಶ್ಚಿಮ ಬಂಗಾಳದ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ತೀವ್ರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಪ್ರಯತ್ನ ಎರಡರಲ್ಲೂ ತಪ್ಪಿತಸ್ಥನೆಂದು ಘೋಷಿಸಿದ್ದು, ಅವನಿಗೆ 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಈ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಬಿಸ್ವರೂಪ್ ಚೌಧರಿ ಅವರ ವಿಭಾಗೀಯ ಪೀಠವು ವೈದ್ಯಕೀಯ ಪರೀಕ್ಷೆಯಲ್ಲಿ ಸಂಭೋಗ ಮಾಡುವ ಯತ್ನ ಅಥವಾ ಸಂಭೋಗ ನಡೆಸಿರುವುದು ಕಂಡುಬಂದಿಲ್ಲ ಎಂದು ಕೋರ್ಟ್ ಹೇಳಿದೆ.
ಸಂತ್ರಸ್ತೆಯ ಹೇಳಿಕೆಯ ಪ್ರಕಾರ ಆರೋಪಿಯು ಮದ್ಯದ ಪ್ರಭಾವದಲ್ಲಿ ಆಕೆಯ ಸ್ತನಗಳನ್ನು ಮುಟ್ಟಲು ಪ್ರಯತ್ನಿಸಿದ್ದಾನೆ. ಇಂತಹ ಪುರಾವೆಗಳು 2012ರ ಪೋಕ್ಸೋ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪವನ್ನು ಬೆಂಬಲಿಸಬಹುದು. ಆದರೆ ಪ್ರಾಥಮಿಕವಾಗಿ ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧವನ್ನು ಸೂಚಿಸಲ್ಲ. ಹಾಗಾಗಿ ಶಿಕ್ಷೆಯ ಪ್ರಮಾಣವನ್ನು ಇಳಿಸಬೇಕು ಎಂದು ಪೀಠವು ತಿಳಿಸಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ, ಅಪರಾಧಿ ಈಗಾಗಲೇ 28 ತಿಂಗಳುಗಳು ಜೈಲ್ಲಿನಲ್ಲಿದ್ದಾನೆ.
