ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ವರದಿಯಾಗುತ್ತಿವೆ. ಅತ್ಯಾಚಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿವೆ. ಕೋಲ್ಕತ್ತಾ ವೈದ್ಯೆ ಮೇಲಿನ ಅತ್ಯಾಚಾರ-ಕೊಲೆ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ, ಆಸ್ಪತ್ರೆಯೊಂದರಲ್ಲಿ ವೈದ್ಯರು ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದು, ಸಂತ್ರಸ್ತ ನರ್ಸ್ ಕಾಮುಕ ವೈದ್ಯನೊಬ್ಬನ ಖಾಸಗಿ ಅಂಗವನ್ನು ಕತ್ತರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಸಮಷ್ಟಿಪುರ ಜಿಲ್ಲೆಯ ಗಂಗಾಪುರದಲ್ಲಿರುವ ಖಾಸಗಿ ಆಸ್ಪತ್ರೆ ‘ಆರ್ಬಿಎಸ್ ಹೆಲ್ತ್ ಕೇರ್ ಸೆಂಟರ್’ನಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ರಾತ್ರಿ ಕೆಲಸ ಮುಗಿಸಿ, ಮನೆಗೆ ಹೊರಡುತ್ತಿದ್ದ ನರ್ಸ್ ಮೇಲೆ ಕಾಮುಕ ವೈದ್ಯ ಸಂಜಯ್ ಕುಮಾರ್, ಆಸ್ಪತ್ರೆಯ ನಿರ್ವಾಹಕ ಸುನಿಲ್ ಕುಮಾರ್ ಗುಪ್ತಾ ಹಾಗೂ ಮತ್ತೋರ್ವ ಸಿಬ್ಬಂದಿ ಅವಧೇಶ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಕಾಮುಕರಿಂದ ತಪ್ಪಿಸಿಕೊಳ್ಳಲು ಸಂತ್ರಸ್ತ ನರ್ಸ್, ವೈದ್ಯನ ಖಾಸಗಿ ಅಂಗವನ್ನು ಬ್ಲೇಡ್ನಿಂದ ಕೊಯ್ದಿದ್ದಾರೆ.
ಬಳಿಕ, ಕಾಮುಕರಿಂದ ತಪ್ಪಿಸಿಕೊಂಡು ಮುಸ್ರಿಘರಾರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.
ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸುವ ಮೊದಲು ಮೂವರೂ ಕಾಮುಕರು ಆಸ್ಪತ್ರೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದರು. ಮಾತ್ರವಲ್ಲದೆ, ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮುಕರಿಂದ ತಪ್ಪಿಸಿಕೊಳ್ಳಲು ನರ್ಸ್ ತೋರಿದ ಧೈರ್ಯ ಶ್ಲಾಘನೀಯ. ವೈದ್ಯನ ಖಾಸಗಿ ಅಂಗವನ್ನು ಕತ್ತರಿಸಿದ ಬ್ಲೇಡ್ ಹಾಗೂ ಅತ್ಯಾಚಾರಕ್ಕೆ ಯತ್ನಕ್ಕೂ ಮುನ್ನ ಮೂವರೂ ಆರೋಪಿಗಳು ಮದ್ಯ ಸೇವಿಸಿದ್ದ ಬಾಟಲಿ ಹಾಗೂ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಹಾರದಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಅದಾಗ್ಯೂ, ಮದ್ಯಪಾನ ಮಾಡಿರುವ ಆರೋಪಿಗಳ ವಿರುದ್ಧ ಮದ್ಯಪಾನ ನಿಷೇಧ ಕಾನೂನಿನ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.