ಜೈಲಿನ ನಿರ್ವಹಣೆಗಾಗಿ ನಿಯೋಜಿಸಲಾಗಿದ್ದ ಮಹಿಲಾ ಅಧಿಕಾರಿಯೊಬ್ಬರ ಮೇಲೆ ಜೈಲರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಆರೋಪಿ ಜೈಲರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳಾ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. “ಜನವರಿ 1ರಂದು ಬಾಗ್‌ಪತ್ ಜಿಲ್ಲಾ ಜೈಲಿನ ಜೈಲರ್, ಆರೋಪಿ ಜಿತೇಂದ್ರ ಕಶ್ಯಪ್ ತನ್ನನ್ನು ಸೂಪರಿಂಟೆಂಡೆಂಟ್ ಕಚೇರಿಗೆ ಕರೆಸಿಕೊಂಡು ಅನುಚಿತವಾಗಿ ವರ್ತಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಬಾಗ್‌ಪತ್ ಜಿಲ್ಲಾ ಜೈಲಿನ ಜೈಲರ್ ಜಿತೇಂದ್ರ ವಿರುದ್ಧ ಅತ್ಯಾಚಾರಕ್ಕೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಅಮಾನತುಗೊಳಿಸಲಾಗಿದೆ.
ಆರೋಪಿ ಜಿತೇಂದ್ರ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
“ಮಹಿಳಾ ಅಧಿಕಾರಿ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಿದ್ದೇವೆ. ದೂರುದಾರರ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ನ್ಯಾಯಾಲಯದಲ್ಲಿ ಅವರ ಹೇಳಿಕೆಯನ್ನು ದಾಖಲಿಸಲಾಗುವುದು. ಜೈಲಿನ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಲಾಗುತ್ತದೆ. ಆರೋಪ ನಿಜವೆಂದು ಸಾಬಿತಾದಲ್ಲಿ, ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಖೇಕ್ರಾ ಸ್ಟೇಷನ್ ಹೌಸ್ ಅಧಿಕಾರಿ ಕೈಲಾಶ್ ಚಂದ್ರ ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಜೈಲುಗಳ ಮಹಾನಿರ್ದೇಶಕರು ತನಿಖಾ ತಂಡ ರಚಿಸಿದ್ದಾರೆ. ತಂಡವು ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.