ಚಲಿಸುತ್ತಿದ್ದ ಟಿಎಸ್‌ಎಸ್‌ಟಿಸಿ ಬಸ್‌ನ ಹಿಂಭಾಗದ ಆಕ್ಸಲ್ ಬೇರ್ಪಟ್ಟಿದ್ದು, ಬಸ್ ಕುಸಿದು ಬಿದ್ದಿರುವ ಘಟನೆ ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಇಡೈಕಲ್ ಬಳಿ ಶುಕ್ರವಾರ ನಡೆದಿದೆ.
ಇಡೈಕಲ್ ಬಳಿ ಹಾದುಹೋಗಿರುವ ತಿರುಮಂಗಲಂ-ಕೊಲ್ಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮಧುರೈನಿಂದ ಕುಟ್ರಾಲಂಗೆ ತೆರಳುತ್ತಿದ್ಧಾಗ ಘಟನೆ ನಡೆದಿದೆ. ತಮಿಳುನಾಡಿನ ಸರ್ಕಾರಿ ಬಸ್‌ನ ಹಿಂಭಾಗದ ಆಕ್ಸಲ್ ಬೇರ್ಪಟ್ಟಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಬಸ್‌ನಲ್ಲಿ 87 ಪ್ರಯಾಣಿಕರಿದ್ದರು, ಅವರಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಪಘಾತಕ್ಕೀಡಾದ ಬಸ್ ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂರು ಡಿಪೋಗೆ ಸೇರಿದ್ದಾಗಿದೆ. ಜೋಡಿಯಾಗಿರುವ ಟೈರ್‌ಗಳು ಸೇರಿದಂತೆ ಸಂಪೂರ್ಣ ಹಿಂಭಾಗದ ಆಕ್ಸಲ್ ಇದ್ದಕ್ಕಿದ್ದಂತೆ ಬಸ್‌ನಿಂದ ಬೇರ್ಪಟ್ಟಿದೆ. ಘಟನೆಯು ಪ್ರಯಾಣಿಕರಲ್ಲಿ ಭಯಭೀತಿ ಮೂಡಿಸಿತ್ತು. ಬಸ್‌ನ ಚಕ್ರಗಳು ಅದುರುತ್ತಿದ್ದುದ್ದನ್ನು ಅರಿತ ಚಾಲಕ ತಕ್ಷಣವೇ ಬಸ್‌ಅನ್ನು ನಿಧಾನಗೊಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಆಕ್ಸಲ್ ಕಳಚಿಕೊಂಡಿದೆ ಎಂದು ವರದಿಯಾಗಿದೆ
ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.