ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞ ಆರ್‌ಎಫ್ ನಾರಿಮನ್ ನಿರಾಶೆ ವ್ಯಕ್ತಪಡಿಸಿದ್ದಾರೆ. “ಈ ತೀರ್ಪು ಇದು ಜಾತ್ಯತೀತ ತತ್ವಕ್ಕೆ ನ್ಯಾಯ ಒದಗಿಸಿಲ್ಲ” ಎಂದು ಅಭಿಪ್ರಾಯಿಸಿದ್ದಾರೆ.
ಮಾಜಿ ಸಿಜೆಐ ಎಎಂ ಅಹ್ಮದಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಅಹ್ಮದಿ ಫೌಂಡೇಶನ್‌ನ ಉದ್ಘಾಟನಾ ಭಾಷಣವನ್ನು ಮಾಡಿದ ನ್ಯಾಯಮೂರ್ತಿ ನಾರಿಮನ್, 2019ರ ಅಯೋಧ್ಯೆ ತೀರ್ಪಿನಲ್ಲಿ ಎತ್ತಿಹಿಡಿಯಲಾದ ಪೂಜಾ ಸ್ಥಳಗಳ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಯಾದವ್ ಅವರಿಗೆ ನಿವೃತ್ತಿಯ ನಂತರ ಉತ್ತರ ಪ್ರದೇಶದಲ್ಲಿ ಲೋಕಾಯುಕ್ತ ಹುದ್ದೆ ಹೇಗೆ ಸಿಕ್ಕಿತು ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.
ಇದನ್ನು ಓದಿದ್ದೀರಾ? ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ
‘ಜಾತ್ಯತೀತತೆ ಮತ್ತು ಭಾರತೀಯ ಸಂವಿಧಾನ’ ಕುರಿತು ಮಾತನಾಡಿದ ಅವರು, “ಜಾತ್ಯತೀತತೆಗೆ ಅದರ ಅರ್ಹತೆಯನ್ನು ನೀಡಲಾಗಿಲ್ಲ, ಇದು ನ್ಯಾಯದ ದೊಡ್ಡ ವಿಡಂಬನೆಯಾಗಿದೆ” ಎಂದು ಅಭಿಪ್ರಾಯಿಸಿದರು. ಈ ವೇಳೆ ಅಯೋಧ್ಯೆ ತೀರ್ಪನ್ನು ಉಲ್ಲೇಖಿಸಿದರು.
Justice Rohington Nariman on why the part of the SC Judgement on Ayodhya which deals with the places of worship Act (which freezes places of worship as on 1947) should be read out to all HC & District Court judges to nip this survey of mosque’s business in the bud pic.twitter.com/cnOeHZBHSV
— Prashant Bhushan (@pbhushan1) December 6, 2024
ಮಸೀದಿ ಧ್ವಂಸ ಕಾನೂನುಬಾಹಿರ ಎಂದು ಹೇಳಿರುವ ನ್ಯಾಯಾಲಯ ಅದೇ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ತೀರ್ಪಿನ ವೇಳೆ ನೀಡಿದ ಕಾರಣವನ್ನು ಒಪ್ಪಲಾಗದು ಎಂದರು.
“ಇಂದು ನಾವು ಅಲ್ಲಲ್ಲಿ ಇಂತಹ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಮಸೀದಿಗಳು ಮಾತ್ರವಲ್ಲದೆ ದರ್ಗಾಗಳ ವಿರುದ್ಧವೂ ಎಲ್ಲೆಡೆ ದಾವೆ ಹೂಡಲಾಗುತ್ತಿದೆ. ನನ್ನ ಪ್ರಕಾರ, ಇವೆಲ್ಲವೂ ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
