ಆಧುನಿಕ ವೈದ್ಯಕೀಯ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ಮುಂದುವರೆಸಿರುವ ಪತಂಜಲಿ ಆಯುರ್ವೇದ ಸಂಸ್ಥೆ ಹಾಗೂ ಸಂಸ್ಥೆಯ ಸಹ-ಸಂಸ್ಥಾಪಕ ಬಾಬಾ ರಾಮ್ ದೇವ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಛೀಮಾರಿ ಹಾಕಿದೆ.
ದಾರಿ ತಪ್ಪಿಸುವ ಜಾಹೀರಾತುಗಳ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಬಾಬಾ ರಾಮ್‌ದೇವ್ ಹಾಗೂ ಸಹ ಸಂಸ್ಥಾಪಕರಾಗಿರುವ ಕಂಪನಿಗೆ ಕಠಿಣ ಎಚ್ಚರಿಕೆ ನೀಡಿದೆ.
ಪತಂಜಲಿ ಆಯುರ್ವೇದ ಇಂತಹ ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು. ನ್ಯಾಯಾಲಯವು ಅಂತಹ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಇನ್ನು ಮುಂದೆ ಈ ರೀತಿ ಆದರೆ ನ್ಯಾಯಾಲಯವು ಸುಳ್ಳು ಜಾಹೀರಾತು ನೀಡುವ ಪ್ರತಿ ಉತ್ಪನ್ನದ ಮೇಲೂ 1 ಕೋಟಿ ರೂ. ದಂಡ ವಿಧಿಸುತ್ತದೆ ಎಂದು ನ್ಯಾಯಮೂರ್ತಿ ಅಮಾನುಲ್ಲಾ ಮೌಖಿಕವಾಗಿ ಹೇಳಿದರು.
ಪತಂಜಲಿ ಆಯುರ್ವೇದವು ಭವಿಷ್ಯದಲ್ಲಿ ಅಂತಹ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದು ಮತ್ತು ಪತ್ರಿಕಾಮಾಧ್ಯಮದಲ್ಲಿ ಸಾಂದರ್ಭಿಕ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಬೇಕು ಎಂದು ನ್ಯಾಯಾಲಯವು ತಿಳಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ಏಜೆಂಟರಾಗಿರುವ ರಾಜ್ಯಪಾಲರುಗಳಿಗೆ ಸುಪ್ರೀಮ್ ಚಾವಟಿ!
ಈ ಪ್ರಕರಣವನ್ನು “ಅಲೋಪತಿ ವಿರುದ್ಧ ಆಯುರ್ವೇದ” ಚರ್ಚೆಯನ್ನಾಗಿ ಮಾಡಲು ಬಯಸುವುದಿಲ್ಲ. ಆದರೆ ತಪ್ಪುದಾರಿಗೆಳೆಯುವ ವೈದ್ಯಕೀಯ ಜಾಹೀರಾತುಗಳ ಸಮಸ್ಯೆಗೆ ನಿಜವಾದ ಪರಿಹಾರವನ್ನು ಕಂಡುಕೊಳ್ಳಲು ಬಯಸಿದೆ ಎಂದು ಪೀಠವು ವಿಚಾರಣೆಯ ಸಂದರ್ಭದಲ್ಲಿ ಹೇಳಿತು.
ಸಮಸ್ಯೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿರುವುದಾಗಿ ತಿಳಿಸಿದ ಪೀಠ, ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ಸೂಕ್ತ ಶಿಫಾರಸುಗಳೊಂದಿಗೆ ವಿಚಾರಣೆಗೆ ಆಗಮಿಸುವಂತೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರಿಗೆ ತಿಳಿಸಿದರು. ಮುಂದಿನ ವಿಚಾರಣೆಯನ್ನು 2024ರ ಫೆಬ್ರವರಿ 5 ರಂದು ಪರಿಗಣಿಸಲಾಗುವುದು ಎಂದು ಪೀಠ ತಿಳಿಸಿತು.
ಕಳೆದ ವರ್ಷ, ಭಾರತೀಯ ವೈದ್ಯಕೀಯ ಸಂಘ ಅರ್ಜಿಯ ಮೇಲೆ ನೋಟಿಸ್ ಜಾರಿ ಮಾಡುವಾಗ, ಅಲೋಪತಿಯಂತಹ ಆಧುನಿಕ ವೈದ್ಯಕೀಯ ವ್ಯವಸ್ಥೆಗಳ ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನ್ಯಾಯಾಲಯವು ಬಾಬಾ ರಾಮ್‌ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
“ಬಾಬಾ ರಾಮ್‌ದೇವ್ ಅವರು ತಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಬಹುದು. ಆದರೆ ಅವರು ಇತರ ಉತ್ಪನ್ನಗಳನ್ನು ಏಕೆ ಟೀಕಿಸಬೇಕು. ಅವರು ಇತರ ವ್ಯವಸ್ಥೆಗಳನ್ನು ಟೀಕಿಸಬಾರದು. ಸಂಯಮವನ್ನು ಅನುಸರಿಸಬೇಕು” ಎಂದು ಭಾರತದ ಅಂದಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದ್ದರು.