- ಮಣಿಪುರದಲ್ಲಿ ಕೊಲೆಗಳು ನಡೆಯುವುದು ಸಾಮಾನ್ಯ ಎಂದಿದ್ದ ಶೇಷಾದ್ರಿ
- ಸಿಜೆಐ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಲೇಖಕ
ಮಣಿಪುರ ಹಿಂಸಾಚಾರ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಖ್ಯಾತ ರಾಜಕೀಯ ವಿಶ್ಲೇಷಕ ಮತ್ತು ಲೇಖಕ ಬದ್ರಿ ಶೇಷಾದ್ರಿ ಅವರನ್ನು ತಮಿಳುನಾಡು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶೇಷಾದ್ರಿ ಅವರ ಹೇಳಿಕೆಯನ್ನು ವಿರೋಧಿಸಿ ತಮಿಳುನಾಡಿದ ಪೆರಂಬದೂರು ಜಿಲ್ಲೆಯ ಕಣ್ಣಂ ಮೂಲದ ವಕೀಲ ಕವಿಯರಸು ಎಂಬುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಐಪಿಸಿ ಸೆಕ್ಷನ್ 153, 153 A, 505(1)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೇಷಾದ್ರಿಯವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಯುಟ್ಯೂಬ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಶೇಷಾದ್ರಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಮಾತನಾಡಿದ್ದರು. “ಮಣಿಪುರ ಕಡಿದಾದ ಬೆಟ್ಟಗಳಿಂದ ಕೂಡಿದ ಇಕ್ಕಟ್ಟಿನ ಭೂ ಪ್ರದೇಶ. ಅಲ್ಲಿ ಸಾಮಾನ್ಯವಾಗಿಯೇ ಕೊಲೆಗಳು ನಡೆಯುತ್ತವೆ, ಅದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದಿದ್ದರು.
ಮುಂದುವರಿದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಬಗ್ಗೆ ಮಾತನಾಡಿದ್ದ ಶೇಷಾದ್ರಿ, “ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನೀವು ನಿಯಂತ್ರಿಸದಿದ್ದರೆ, ನಾವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿದ್ದರೆ ಚಂದ್ರಚೂಡ್ ಅವರ ಕೈಗೆ ಒಂದು ಬಂದೂಕನ್ನು ಕೊಟ್ಟು ಮಣಿಪುರಕ್ಕೆ ಕಳಿಸಬೇಕು. ಮಣಿಪುರದಲ್ಲಿ ಅವರು ಶಾಂತಿಯನ್ನು ಪುನಃಸ್ಥಾಪಿಸುತ್ತಾರೆಯೇ ಎಂಬುದನ್ನು ನೋಡಬೇಕು” ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಶೇಷಾದ್ರಿ ಅವರ ಬಂಧನವನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ವಿರೋಧಿಸಿದ್ದು, “ಭ್ರಷ್ಟ ಡಿಎಂಕೆ ಸರ್ಕಾರ ಜನಸಾಮಾನ್ಯರ ವಾದವನ್ನು ಎದುರಿಸುವ ಧೈರ್ಯ ತೋರದೆ ಬಂಧಿಸುತ್ತಿದೆ. ತಮಿಳುನಾಡು ಪೊಲೀಸರು ಸರ್ಕಾರದ ಸೇಡಿನ ರಾಜಕೀಯಕ್ಕೆ ದಾಳವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.