ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಜಾರ್ಖಂಡ್‌ಗೆ ಭೇಟಿ ನೀಡಿದ ಸಂದರ್ಭ ಬಾಂಗ್ಲಾದೇಶೀಯರ ಬಗ್ಗೆ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಬಾಂಗ್ಲಾದೇಶ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಬಾಂಗ್ಲಾದೇಶೀಯರ ವಿರುದ್ಧ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ಭಾರತದ ರಾಜಕಾರಣಿಗಳು ನೀಡದಂತೆ ಬಾಂಗ್ಲಾದೇಶ ಎಚ್ಚರಿಕೆ ನೀಡಿದೆ.
ಕಳೆದ ವಾರ ಜಾರ್ಖಂಡ್‌ಗೆ ಭೇಟಿ ನೀಡಿದ್ದ ಅಮಿತ್ ಶಾ ಅವರು, “ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿಯು ಪ್ರತಿಯೊಬ್ಬ ಬಾಂಗ್ಲಾದೇಶಿ ನುಸುಳುಕೋರರಿಗೆ ಪಾಠ ಕಲಿಸಲು ಅವರನ್ನು ತಲೆಕೆಳಗಾಗಿ ನೇತುಹಾಕಲಾಗುತ್ತದೆ” ಎಂದು ಹೇಳಿಕೊಂಡಿದ್ದರು.
ಈ ಹೇಳಿಕೆಗೆ ಬಾಂಗ್ಲಾದೇಶ ಸರ್ಕಾರ ಸೋಮವಾರ ಪ್ರತಿಭಟನೆಯನ್ನು ದಾಖಲಿಸಿದೆ. ಈ ಹೇಳಿಕೆಗಳು ‘ಅತ್ಯಂತ ಶೋಚನೀಯ’ ಎಂದು ಬಾಂಗ್ಲಾದೇಶ ಹೇಳಿದೆ. ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಢಾಕಾದಲ್ಲಿರುವ ಭಾರತದ ಡೆಪ್ಯುಟಿ ಹೈಕಮಿಷನರ್‌ಗೆ ಪ್ರತಿಭಟನೆಯ ಟಿಪ್ಪಣಿಯನ್ನು ಹಸ್ತಾಂತರಿಸಿದೆ.
ಇದನ್ನು ಓದಿದ್ದೀರಾ? ಬಾಂಗ್ಲಾದೇಶ | ಪ್ರತಿಭಟನಾಕಾರರ ಬೆದರಿಕೆ; ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೀನಾಮೆ
ಈ ರೀತಿಯ ‘ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲದ’ ಹೇಳಿಕೆಗಳನ್ನು ನೀಡದಂತೆ ತನ್ನ ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡುವಂತೆ ಬಾಂಗ್ಲಾದೇಶ ಸರ್ಕಾರವು ಭಾರತ ಸರ್ಕಾರಕ್ಕೆ ಒತ್ತಾಯಿಸಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
“ಸಚಿವಾಲಯವು ತನ್ನ ಗಂಭೀರ, ಆಳವಾದ ನೋವು ಮತ್ತು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಅಂತಹ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ನೀಡದಂತೆ ರಾಜಕೀಯ ನಾಯಕರಿಗೆ ಸಲಹೆ ನೀಡುವಂತೆ ಭಾರತ ಸರ್ಕಾರಕ್ಕೆ ಕರೆ ನೀಡಿದೆ” ಎಂದು ಪ್ರತಿಭಟನಾ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
“ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ನೆರೆಯ ರಾಷ್ಟ್ರದ ಪ್ರಜೆಗಳ ವಿರುದ್ಧ ಇಂತಹ ಟೀಕೆಗಳನ್ನು ಮಾಡುವುದು ಎರಡು ಸ್ನೇಹಪರ ದೇಶಗಳ ನಡುವಿನ ಪರಸ್ಪರ ಗೌರವ ಮತ್ತು ತಿಳುವಳಿಕೆಯ ಮನೋಭಾವವನ್ನು ದುರ್ಬಲಗೊಳಿಸುತ್ತವೆ” ಎಂದು ಬಾಂಗ್ಲಾದೇಶ ಸಚಿವಾಲಯವು ಒತ್ತಿಹೇಳಿದೆ.
