2023ರ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳು 2.09 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸೂಲಾಗದ ಸಾಲಗಳನ್ನು ರೈಟ್ ಆಫ್ ಮಾಡಿವೆ.
ಇದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್‌ಗಳು ರೈಟ್ ಆಫ್ ಮಾಡಿದ ಸಾಲದ ಪ್ರಮಾಣ 10.57 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಆರ್‌ಟಿಐಗೆ ನೀಡಿದ ಉತ್ತರವೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಆರ್‌ಟಿಐ ಮಾಹಿತಿಯಂತೆ 2021 ರಲ್ಲಿ 174,966 ಕೋಟಿ ರೂ., 2022 ರ ಅವಧಿಯಲ್ಲಿ 202,781 ಕೋಟಿ ರೂ. ಹಾಗೂ 2023ರಲ್ಲಿ 2,09,144 ಕೋಟಿ ರೂ. ರೈಟ್ ಆಫ್ ಮಾಡಲಾಗಿದೆ.
ರೈಟ್ ಆಫ್‌ಗಳ ಹೊರತಾಗಿಯೂ 2021 ರಲ್ಲಿ 30,104 ಕೋಟಿ, 2022 ರಲ್ಲಿ 33,534 ಕೋಟಿ ರೂ. ಮತ್ತು 2023 ರಲ್ಲಿ 45,548 ಕೋಟಿ ರೂ. ಮಾತ್ರ ಸಾಲ ವಸೂಲಿ ಮಾಡಲಾಗಿದೆ.
ಈ ರೈಟ್ ಆಫ್‌ನಿಂದಾಗಿ ಬ್ಯಾಂಕ್‌ಗಳಿಗೆ ತಮ್ಮ ಒಟ್ಟು ಎನ್‌ಪಿಎಗಳನ್ನು ಅಥವಾ ಸಾಲಗಾರರು ಮರುಪಾವತಿಸಲು ವಿಫಲವಾದ ಸಾಲವನ್ನು ಹತ್ತು ವರ್ಷಗಳಲ್ಲಿಯೇ ಕಡಿಮೆ ಪ್ರಮಾಣಕ್ಕೆ (ಶೇ 3.9) ಇಳಿಸಲು ಸಾಧ್ಯವಾಗಿದೆ. ಆರ್ಥಿಕ ವರ್ಷ 2018ರಲ್ಲಿ ಒಟ್ಟು ಎನ್‌ಪಿಎಗಳು 10.21 ಲಕ್ಷ ಕೋಟಿ ರೂ. ಇದ್ದರೆ, 2023ರಲ್ಲಿ 5.55 ಲಕ್ಷ ಕೋಟಿ ರೂ. ಆಗಿದೆ.
ಆರ್ಥಿಕ ವರ್ಷ 2012-13ರಿಂದ ಬ್ಯಾಂಕ್‌ಗಳು ಬರೋಬ್ಬರಿ 15,31,453 ಕೋಟಿ ರೂ. ಸಾಲವನ್ನು ರೈಟ್ ಆಫ್ ಮಾಡಿವೆ. ಆದರೆ ಹೀಗೆ ರೈಟ್ ಆಫ್ ಮಾಡಿದ ಸಾಲಗಳು ಮರುಪಾವತಿಯಾಗದ ಸಾಲಗಳು ಎಂದು ಬ್ಯಾಂಕ್‌ಗಳ ಲೆಕ್ಕಪುಸ್ತಕಗಳಲ್ಲಿ ಉಳಿಯಲಿವೆ.
ಕಳೆದ ಮೂರು ವರ್ಷಗಳಲ್ಲಿ ರೈಟ್ ಆಫ್ ಮಾಡಿದ ಸಾಲದ ಪ್ರಮಾಣ ರೂ 586,891 ಕೋಟಿ ಆಗಿದ್ದರೆ ಅವುಗಳಲ್ಲಿ ಕೇವಲ ರೂ 1,09,186 ಕೋಟಿ (ಶೇ 18.60) ಮರುಪಾವತಿಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಗಢ ಭೂಕುಸಿತ | ನೆಲಸಮಗೊಂಡ ಗ್ರಾಮದಲ್ಲಿ 27 ಸಾವು, 70ಕ್ಕೂ ಹೆಚ್ಚು ನಾಪತ್ತೆ
ರೈಟ್ ಆಫ್ ಎಂದರೇನು?
ರೈಟ್ ಆಫ್ ಎಂದರೆ, ಬ್ಯಾಂಕ್‌ನ ಸಾಲ ಪುಸ್ತಕದಿಂದ ಮತ್ತು ದಾಖಲೆಯಿಂದ ಸಾಲ ಇಲ್ಲವಾಯಿತು ಮತ್ತು ಸಾಲಗಾರ ಸಾಲ ಮುಕ್ತ ಅಥವಾ ಋಣಮುಕ್ತನಾದನೆಂದು ತಿಳಿಯುತ್ತಾರೆ. ಸಾಲ ಬಾಕಿ ಇರಿಸಿಕೊಂಡವನು ತಾನು ಸಾಲ ಬಾಕಿದಾರನಲ್ಲವೆಂದು ಹೇಳಿಕೊಳ್ಳಬಹುದು ಎಂದು ತಿಳಿದುಕೊಳ್ಳುತ್ತಾರೆ. ಇದು ಸರಿಯಾದ ವಿಶ್ಲೇಷಣೆಯಲ್ಲ. ರೈಟ್ ಆಫ್‌ನ ಉದ್ದೇಶವೂ ಇದಾಗಿರುವುದಿಲ್ಲ.
ಬ್ಯಾಂಕುಗಳು ಸಾಲ ವಸೂಲಿ ಮಾಡುವ ಎಲ್ಲ ಮಾರ್ಗಗಳು ಮುಚ್ಚಿದಾಗ ಬ್ಯಾಂಕ್‌ನ ಲೆಕ್ಕ ಪುಸ್ತಕವನ್ನು ಸರಿಪಡಿಸುವ ಅನಿವಾರ್ಯತೆ ಎದುರಾದಾಗ, ಈ ಮಾರ್ಗವನ್ನು ಹಿಡಿಯುತ್ತವೆ. ಈ ಪ್ರಕ್ರಿಯೆಯಲ್ಲಿ ಸಾಲವನ್ನು ಮುಖ್ಯ ಸಾಲ ಪುಸ್ತಕದಿಂದ ಹೊರತೆಗೆದು ಬೇರೆ ಪುಸ್ತಕಕ್ಕೆ ವರ್ಗಾಯಿಸುತ್ತವೆ.
ಅನುತ್ಪಾದಕ ಆಸ್ತಿಯ ಹೊರೆ ಲೆಕ್ಕ ಪುಸ್ತಕದಲ್ಲಿ ಕಡಿಮೆಯಾಗುತ್ತದೆ. ಆದರೆ, ಸಾಲಗಾರ ಸಾಲ ಮುಕ್ತನಾಗುವುದಿಲ್ಲ. ಬ್ಯಾಂಕುಗಳ ಪುಸ್ತಕದಲ್ಲಿ ಮತ್ತು ದಾಖಲೆಗಳಲ್ಲಿ ಅವನು ಸಾಲಗಾರನಾಗಿ ಮುಂದುವರೆಯುತ್ತಾನೆ. ಸಾಲ ಮರುಪಾವತಿ ಮಾಡುವ ಸಾಲಗಾರನ ಬದ್ಧತೆ ಹಾಗೆಯೇ ಇರುತ್ತದೆ. ಹಾಗೆಯೇ, ಜಾಮೀನುದಾರನ ಬದ್ಧತೆಯೂ ಇದರಲ್ಲಿ ಸೇರುತ್ತದೆ. ಸಾಲಗಾರನು ನೀಡಿದ ಭದ್ರತೆಗಳನ್ನು ಕೈಬಿಡುವಂತಿಲ್ಲ ಅಥವಾ ಹಿಂತಿರುಗಿಸುವಂತಿಲ್ಲ. ಸಾಲ ವಸೂಲಾತಿಯ ಎಲ್ಲ ಪ್ರಕ್ರಿಯೆಗಳು ಎಂದಿನಂತೆ ಮುಂದುವರೆಯುತ್ತವೆ.
ಸಾಲ ವಸೂಲಾತಿಯ ಬಗೆಗಿನ ಕಾನೂನಾತ್ಮಕ ಕ್ರಮಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಸಾಲಗಳನ್ನು ರೈಟ್ಆಫ್ ಮಾಡಿದ ನಂತರವೂ ಸಾಲ ವಸೂಲಾದ ಸಾಕಷ್ಟು ದಾಖಲೆಗಳಿವೆ. ಇದರಲ್ಲಿ ಸಾಲಗಾರನಿಗೆ ಯಾವುದೇ ರೀತಿಯ ವಿನಾಯಿತಿ ನೀಡುವ ಸಾಧ್ಯತೆಗಳಿಲ್ಲ.