ಲೋಕಸಭಾ ಚುನಾವಣೆ ವೇಳೆಯಲ್ಲಿ ಆರ್ಥಿಕ ಸಮೀಕ್ಷೆ ಕುರಿತು ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಜನವರಿ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಉತ್ತರ ಪ್ರದೇಶದ ಬರೇಲಿಯ ನ್ಯಾಯಾಲಯವೊಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುಧೀರ್ ಕುಮಾರ್ ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಂಘದ ಮಂಡಲ ಅಧ್ಯಕ್ಷ ಪಂಕಜ್ ಪಾಠಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಮನ್ಸ್ ನೀಡಿದೆ.
ಮೊದಲಿಗೆ ಆಗಸ್ಟ್‌ನಲ್ಲಿ ಪಾಠಕ್ ಶಾಸಕರು ಮತ್ತು ಸಂಸದರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ರಾಹುಲ್ ವಿರುದ್ಧ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ದೇಶದಲ್ಲಿ ದುರ್ಬಲ ವರ್ಗದವರೇ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದರೂ ಅವರು ಹೊಂದಿರುವ ಆಸ್ತಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಹಿತ್ಯ ಸಮ್ಮೇಳನ – ಜನ ಮರುಳೋ-ಜಾತ್ರೆ ಮರುಳೋ ಎಂದಾಗಬಾರದು!
ಇದು ಹೀಗೆ ಮುಂದುವರೆದರೆ ಅತಿ ಹೆಚ್ಚು ಜನಸಂಖ್ಯೆ ಇರುವ ಜನ ಹೆಚ್ಚಿನ ಆಸ್ತಿಗೆ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳುವ ಮೂಲಕ ದುರ್ಬಲ ವರ್ಗದವರಲ್ಲಿ ದ್ವೇಷ ಮತ್ತು ಶತ್ರುತ್ವದ ವಿಷ ಬೀಜ ಬಿತ್ತಲು ರಾಹುಲ್ ಗಾಂಧಿ ಯತ್ನಿಸಿದ್ದಾರೆ ಎಂದು ಪಾಠಕ್ ಪರ ವಕೀಲ ವೀರೇಂದ್ರ ಪಾಲ್ ಗುಪ್ತಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಆಗಸ್ಟ್‌ನಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 27 ರಂದು ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಪಾಠಕ್ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದ್ದರು.
ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಇತರೆ ಹಿಂದುಳಿದ ಸಮುದಾಯಗಳ ಜನಸಂಖ್ಯೆ ಮತ್ತು ಸ್ಥಿತಿಯನ್ನು ನಿಖರವಾಗಿ ನಿರ್ಣಯಿಸಲು ಜಾತಿ ಗಣತಿಯನ್ನು ನಡೆಸಬೇಕು ಎಂದು ಹೈದರಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಹೇಳಿದ್ದರು.
