ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬ್ರಿಟಿಷ್ ಪ್ರಸರಣಾ ಸಂಸ್ಥೆ ‘ಬಿಬಿಸಿ ಇಂಡಿಯಾ’ಗೆ ಜಾರಿ ನಿರ್ದೇಶನಾಲಯ (ಇಡಿ) ಬರೋಬ್ಬರಿ 3.44 ಕೋಟಿ ರೂ. ದಂಡ ವಿಧಿಸಿದೆ.
ಬಿಬಿಸಿ ಸಂಸ್ಥೆಯ ಆದಾಯದ ಬಗ್ಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 2013ರಲ್ಲಿ ಸಮೀಕ್ಷೆ ನಡೆಸಿತ್ತು. ಈ ವೇಳೆ, ಬಿಬಿಸಿ ಗುಂಪಿನ ವಿವಿಧ ಘಟಕಗಳು ವಿವರಿಸಿರುವ ಆದಾಯ ಮತ್ತು ಲಾಭಗಳು ಭಾರತದಲ್ಲಿ ಅವುಗಳ ಕಾರ್ಯಾಚರಣೆಯ ಪ್ರಮಾಣಕ್ಕೆ ಅನುಗುಣವಾಗಿಲ್ಲ. ಬಿಬಿಸಿ ವಿದೇಶಿ ಘಟಕಗಳು ಕೆಲವು ಹಣ ವರ್ಗಾವಣೆಗೆ ಸಂಬಂಧಿಸಿದ ತೆರಿಗೆಯನ್ನು ಪಾವತಿಸಿಲ್ಲ” ಎಂದು ಆರೋಪಿಸಿತ್ತು.
ಇದೇ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಬಿಬಿಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣದಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿ ತೀರ್ಪು ಪ್ರಕಟಿಸಿರುವ ಜಾತಿ ನಿರ್ದೇಶನಾಲಯ, ಬಿಬಿಸಿಗೆ 3.44 ಕೋಟಿ ರೂ. ದಂಡ ವಿಧಿಸಿದೆ.
ಈ ವರದಿ ಓದಿದ್ದೀರಾ?: ಚುನಾವಣಾ ಆಯುಕ್ತರ ನೇಮಕದಲ್ಲಿ ವಿವಾದವೇಕೆ? ಹಳೆಯ ಪ್ರಕ್ರಿಯೆಗೂ – ಹೊಸ ನೀತಿಗೂ ಇರುವ ವ್ಯತ್ಯಾಸವೇನು?
ಆದಾಗ್ಯೂ, ಇಡಿಯಿಂದ ತಮಗೆ ಯಾವುದೇ ಆದೇಶ ಬಂದಿಲ್ಲ ಎಂದು ಬಿಬಿಸಿ ಇಂಡಿಯಾ ಹೇಳಿಕೊಂಡಿದೆ. “ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲ ದೇಶಗಳಲ್ಲಿಯೂ ಅಲ್ಲಿನ ಕಾನೂನು ಮತ್ತು ನಿಯಮಗಳಿಗೆ ಅನುಗುಣವಾಗಿಯೇ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇಡಿಯಿಂದ ಆದೇಶ ಬಂದಿಲ್ಲ. ಅದರ ಕುರಿತಾದ ಮುಂದಿನ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ” ಎಂದು ಬಿಬಿಸಿ ಇಂಡಿಯಾ ಹೇಳಿದೆ.
ಗಮನಾರ್ಹವಾಗಿ, 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರಾ ಹತ್ಯಾಕಾಂಡದಲ್ಲಿ ಸುಮಾರು 1,000 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಮುಸ್ಲಿಮರು. ಆ ಹತ್ಯಾಕಾಂಡದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರಗಳ ಕುರಿತಾದ ಸಾಕ್ಷ್ಯಚಿತ್ರವನ್ನು ಬಿಬಿಸಿ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಆ ಸಾಕ್ಷ್ಯಾಚಿತ್ರ ಬಿಡುಗಡೆಯಾ ಬಳಿಕ, ಬಿಬಿಸಿ ವಿರುದ್ಧ ಹಲವಾರು ದಾಳಿಗಳು ನಡೆದಿವೆ. ಅಂತಹ ದಾಳಿಯಲ್ಲಿ ಸಿಬಿಡಿಟಿ ನಡೆಸಿದ ಸಮೀಕ್ಷಾ ದಾಳಿಯೂ ಒಂದು.