ಮೋದಿ ಅವಧಿಯಲ್ಲಿ ಪಾತಾಳಕ್ಕೆ ಕುಸಿದಿದೆ ಭಾರತದ ಶಿಕ್ಷಣ ಬಜೆಟ್ ‘ಕಾಕ್ರೋಚ್ ಆಕ್ರೋಶ’ದ ಹಿಂದಿದೆ ಶಿಕ್ಷಣದ ಅಧಃಪತನ

Date:

ಕೊಠಾರಿ ಆಯೋಗದಿಂದ ಹಿಡಿದು ಈಗಿನ ಎನ್‌ಇಪಿ-2020ರ ವರೆಗೆ, ಜಿಡಿಪಿಯ ಶೇ. 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂಬುದು ಬಹುಕಾಲದ ಹಿಂದೆಯೇ ಗೊತ್ತು ಮಾಡಿರುವ ಗುರಿ. ಆದರೆ, 2013-14ರಲ್ಲಿ ಜಿಡಿಪಿಯ ಶೇ. 3.1ರಷ್ಟಿದ್ದ ಶಿಕ್ಷಣದ ಮೇಲಿನ ಒಟ್ಟು ಸಾರ್ವಜನಿಕ ವೆಚ್ಚ, ಮೋದಿ ಸರ್ಕಾರದಲ್ಲಿ ಮತ್ತಷ್ಟು ಕುಗ್ಗಿದೆಯೇ ವಿನಾ ಹಿಗ್ಗಿಲ್ಲ. ಕಳೆದ ಹನ್ನೆರಡು ವರ್ಷಗಳಲ್ಲಿ ಏರಿಕೆ ಕಾಣುವ ಬದಲು ಶೇ. 2.7 ರಿಂದ ಶೇ. 3.1ರ ಮಟ್ಟದಲ್ಲೇ ಸಿಲುಕಿ ನರಳುತ್ತಿದೆ.

- Advertisement -

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ಸೇರಿರುವ ಸಾವಿರಾರು ಯುವಜನರು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆಸುತ್ತಿರುವ ಬೃಹತ್ ಪ್ರತಿಭಟನೆಯು ಕೇವಲ 2026ರ ‘ನೀಟ್’ (ನೀಟ್-ಯುಜಿ) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧದ ಆಕ್ರೋಶವಷ್ಟೇ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ 150ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆಗಳು ಸೋರಿಕೆಯಾಗಿ, ಯುವಜನರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಹೊಣೆಗೇಡಿ ವ್ಯವಸ್ಥೆಯೊಂದರ ವಿರುದ್ಧ ಸಿಡಿದೆದ್ದ ಸಿಟ್ಟು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ವಾಸ್ತವದಲ್ಲಿ, ರಸ್ತೆಗಿಳಿದಿರುವ ಯುವಜನರ ಈ ಆಕ್ರೋಶವು ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಆಳವಾದ ಬಿಕ್ಕಟ್ಟಿನ ಒಂದು ಸಣ್ಣ ರೋಗಲಕ್ಷಣವಷ್ಟೇ. ಈ ಬಿಕ್ಕಟ್ಟಿನ ಮೂಲ ಬೇರು ಇರುವುದು, ಕಳೆದ ಹನ್ನೆರಡು ವರ್ಷಗಳಲ್ಲಿ (2014-2026) ಶಿಕ್ಷಣ ಕ್ಷೇತ್ರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಆರ್ಥಿಕವಾಗಿ ಕತ್ತು ಹಿಸುಕುತ್ತಿರುವುದರಲ್ಲಿ. ‘ವಿಶ್ವಗುರು’ವಿನಂತಹ ಕನಸುಗಳನ್ನು ಬಿತ್ತುವ ಒಣ ಘೋಷಣೆಗಳ ನಡುವೆಯೇ, ಶಿಕ್ಷಣ ಕ್ಷೇತ್ರವು ತೀವ್ರ ಆರ್ಥಿಕ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಇದೀಗ ಅಂಕಿ-ಅಂಶಗಳಿಂದ ಬಟಾಬಯಲಾಗಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ಬಜೆಟ್‌ನ ಅಂಕಿ-ಅಂಶಗಳನ್ನು ಮೇಲ್ನೋಟಕ್ಕೆ ನೋಡಿದರೆ, ಅನುದಾನ ಗಣನೀಯವಾಗಿ ಹೆಚ್ಚಾದಂತೆ ಒಂದು ದೊಡ್ಡ ಭ್ರಮೆ ಸೃಷ್ಟಿಯಾಗುತ್ತದೆ. 2014-15ನೇ ಸಾಲಿನಲ್ಲಿ 68,874 ಕೋಟಿ ರೂಪಾಯಿಗಳಷ್ಟಿದ್ದ ಶಿಕ್ಷಣ ಬಜೆಟ್, 2026ರ ಹೊತ್ತಿಗೆ 1,39,289 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದರ ಹಿಂದಿರುವ ವಾಸ್ತವದ ಲೆಕ್ಕಾಚಾರವೇ ಬೇರೆ. 2014-15ರಲ್ಲಿ ಕೇಂದ್ರದ ಒಟ್ಟು ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ. 4.14ರಷ್ಟು ಪಾಲು ನೀಡಲಾಗಿತ್ತು. ಒಂದು ವೇಳೆ ಸರ್ಕಾರ ಅದೇ ಶೇ. 4.14ರ ಅನುಪಾತವನ್ನು ಇಂದಿಗೂ (2026ರ ವರೆಗೆ) ಕಾಯ್ದುಕೊಂಡು ಬಂದಿದ್ದರೆ, ಇಂದಿನ ಒಟ್ಟು ಬಜೆಟ್‌ನ ಗಾತ್ರದ ಆಧಾರದ ಮೇಲೆ ಶಿಕ್ಷಣ ಬಜೆಟ್ ಸರಿಸುಮಾರು 2.30 ಲಕ್ಷ ಕೋಟಿ ರೂಪಾಯಿಗಳಷ್ಟಿರಬೇಕಿತ್ತು! ಆದರೆ, ಪ್ರಸ್ತುತ ಶಿಕ್ಷಣಕ್ಕೆ ನೀಡುತ್ತಿರುವುದು ಕೇವಲ 1.39 ಲಕ್ಷ ಕೋಟಿ ರೂ. (ಅಂದರೆ ಕೇವಲ ಶೇ. 2.5ರಷ್ಟು) ಮಾತ್ರ. ಅಂದರೆ, ಹಳೆಯ ಅನುಪಾತದ ಪ್ರಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಸಿಗಬೇಕಿದ್ದ ಹಣದಲ್ಲಿ ಬರೋಬ್ಬರಿ 91 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನವನ್ನು ಕಸಿದುಕೊಂಡು, ಮೇಲ್ನೋಟಕ್ಕೆ ಮಾತ್ರ ಮೊತ್ತ ಹೆಚ್ಚಳದ ಭ್ರಮೆ ಮೂಡಿಸಲಾಗಿದೆ.

ಒಂದೆಡೆ ಕೇಂದ್ರ ಸರ್ಕಾರದ ಒಟ್ಟು ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳೆಯುತ್ತಿದೆ. ಆದರೆ, ಆ ಬೃಹತ್ ಬಜೆಟ್‌ನಲ್ಲಿ ಶಿಕ್ಷಣದ ಪಾಲು ಮಾತ್ರ ಕಳವಳಕಾರಿಯಾಗಿ ಕುಸಿದಿದೆ. 2014-15ರ ಅವಧಿಯಲ್ಲಿ ಕೇಂದ್ರದ ಒಟ್ಟು ಬಜೆಟ್‌ನಲ್ಲಿ ಶಿಕ್ಷಣದ ಪಾಲು 4.14ರಷ್ಟಿತ್ತು. ಹತ್ತು ವರ್ಷಗಳ ನಂತರ 2024-25ರ ಹೊತ್ತಿಗೆ ಈ ಪ್ರಮಾಣ ಕೇವಲ ಶೇ. 2.5ಕ್ಕೆ ಕುಸಿದುಹೋಗಿದೆ! 2025-26 ಮತ್ತು 2026-27ರ ಬಜೆಟ್‌ಗಳಲ್ಲೂ ಇದು ಶೇ. 2.5ರ ಆಸುಪಾಸಿನಲ್ಲೇ ಮಂಕಾಗಿ ಸ್ಥಗಿತಗೊಂಡಿದೆ. ದೇಶದ ಆರ್ಥಿಕತೆ ಮತ್ತು ಒಟ್ಟು ಬಜೆಟ್ ಗಾತ್ರ ವಿಸ್ತಾರವಾದಂತೆಲ್ಲಾ ಶಿಕ್ಷಣ, ಆರೋಗ್ಯದಂತಹ ಮೂಲಭೂತ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಆದರೆ, ಅದರ ಮೇಲೆ ನಿರ್ದಾಕ್ಷಿಣ್ಯವಾಗಿ ಕತ್ತರಿ ಆಡಿಸಿದೆ ಮೋದಿ ಸರ್ಕಾರ.

ಸಿಜೆಪಿ

ಒಟ್ಟು ಆಂತರಿಕ ಉತ್ಪನ್ನ ಅಥವಾ ಜಿಡಿಪಿ (GDP) ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಸಾರ್ವಜನಿಕ ಶೈಕ್ಷಣಿಕ ವೆಚ್ಚವನ್ನು ಗಮನಿಸಿದರೆ ವಾಸ್ತವದ ಚಿತ್ರಣ ಮತ್ತಷ್ಟು ಭೀಕರವಾಗಿದೆ. ಸ್ವಾತಂತ್ರ್ಯಾನಂತರದ ಕೊಠಾರಿ ಆಯೋಗದಿಂದ ಹಿಡಿದು ಈಗಿನ 2020ರ ಎನ್‌ಇಪಿ ವರೆಗೆ, ಜಿಡಿಪಿಯ ಶೇ. 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂಬುದು ನಿಗದಿ ಮಾಡಲಾಗುತ್ತ ಬಂದಿರುವ ಗುರಿ. ಆದರೆ, 2013-14ರಲ್ಲಿ ಜಿಡಿಪಿಯ ಶೇ. 3.1ರಷ್ಟಿದ್ದ ಶಿಕ್ಷಣದ ಮೇಲಿನ ಒಟ್ಟು ಸಾರ್ವಜನಿಕ ವೆಚ್ಚ, ಮೋದಿ ಸರ್ಕಾರದ ಕಳೆದ ಹನ್ನೆರಡು ವರ್ಷಗಳಲ್ಲಿ ಏರಿಕೆ ಕಾಣುವ ಬದಲು ಶೇ. 2.7 ರಿಂದ ಶೇ. 3.1ರ ವ್ಯಾಪ್ತಿಯಲ್ಲೇ ಸಿಲುಕಿ ನರಳುತ್ತಿದೆ. ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳ ಪ್ರಕಾರ, 2023-24ರಲ್ಲಿ ಇದು ಕೇವಲ ಶೇ. 2.7ಕ್ಕೆ ಇಳಿದಿರುವುದು ಶೈಕ್ಷಣಿಕ ವಲಯದ ದಯನೀಯ ಸ್ಥಿತಿಯನ್ನು ಸಂಪೂರ್ಣವಾಗಿ ಅನಾವರಣಗೊಳಿಸಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿರುವ ಈ ಬಿಕ್ಕಟ್ಟು ಕೇವಲ ಅನುದಾನದ ಕೊರತೆಯಲ್ಲಷ್ಟೇ ಇಲ್ಲ, ಬದಲಾಗಿ ಆಡಳಿತಾತ್ಮಕ ವೈಫಲ್ಯ ಮತ್ತು ಆದ್ಯತೆಗಳ ಬದಲಾವಣೆಯಲ್ಲೂ ಎದ್ದುಕಾಣುತ್ತಿದೆ. 45 ಪ್ರಮುಖ ಪರೀಕ್ಷಾ ಅಕ್ರಮಗಳ ಪ್ರಕರಣಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಶಿಕ್ಷೆಯಾಗಿದೆ ಮತ್ತು ಪರೀಕ್ಷಾ ಹಗರಣದ ಕೆಲವು ಆರೋಪಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂಬುದು ವ್ಯವಸ್ಥೆಯ ದೊಡ್ಡ ದುರಂತ. ಇಂತಹ ನಿರ್ಲಕ್ಷ್ಯಕ್ಕೆ ಮೂಲ ಕಾರಣ ಸರ್ಕಾರದ ಆದ್ಯತೆಗಳು ಬದಲಾಗಿರುವುದು. 12 ವರ್ಷಗಳ ಹಿಂದೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಒಟ್ಟು ಬಜೆಟ್‌ನ ಶೇ. 6.5ರಷ್ಟು ಹಣ ಮೀಸಲಿಟ್ಟಿದ್ದರೆ, ರಸ್ತೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಕೇವಲ ಶೇ. 1.8ರಷ್ಟು ಹಣ ನೀಡಲಾಗುತ್ತಿತ್ತು.

ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತಲೆಕೆಳಗಾಗಿದೆ. ಶಿಕ್ಷಣ ಮತ್ತು ಆರೋಗ್ಯದ ಒಟ್ಟು ಪಾಲು ಶೇ. 4.5ಕ್ಕೆ ಕುಸಿದಿದ್ದರೆ, ಕೇವಲ ಹೆದ್ದಾರಿ ಸಚಿವಾಲಯದ ಪಾಲು ಬರೋಬ್ಬರಿ ಶೇ. 5.8ಕ್ಕೆ ಏರಿಕೆಯಾಗಿದೆ. ಭೌತಿಕ ಮೂಲಸೌಕರ್ಯಗಳಿಗೆ (ರಸ್ತೆ, ಸೇತುವೆ) ಅಪಾರ ಹಣ ಸುರಿಯುತ್ತಿರುವ ಸರ್ಕಾರ, ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಕೆನೆತ್ ಗಾಲ್ಬ್ರೈತ್ ಅವರು ಹೇಳಿದಂತೆ, “ವಸ್ತುಗಳ ಮೇಲೆ ಅತಿಯಾಗಿ ಹೂಡಿಕೆ ಮಾಡಿ, ಜನರ (ಮಾನವ ಸಂಪನ್ಮೂಲದ) ಮೇಲೆ ಹೂಡಿಕೆ ಮಾಡದಿರುವ” ಅತ್ಯಂತ ಅಪಾಯಕಾರಿ ಹಾದಿ ಹಿಡಿದಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ (2004-2014) ಕೇಂದ್ರದ ಶಿಕ್ಷಣ ವೆಚ್ಚವು ಜಿಡಿಪಿಯ ಸರಾಸರಿ ಶೇ. 0.61ರಷ್ಟಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಇದು ಶೇ. 0.44ಕ್ಕೆ ಕುಸಿದಿದೆ. ಅಂತೆಯೇ, 2014-2024ರ ನಡುವಿನ ಬಜೆಟ್ ವಿಶ್ಲೇಷಣೆಯು, ಶಿಕ್ಷಣ ಬಜೆಟ್‌ನಲ್ಲಿ ನಾಮಮಾತ್ರ ಹೆಚ್ಚಳವಾಗಿದ್ದರೂ ನೈಜ ಮೌಲ್ಯದಲ್ಲಿ ಕುಸಿದಿದೆ, ಒಟ್ಟು ಬಜೆಟ್ ಪಾಲಿನಲ್ಲಿ ಶೇ. 40ರಷ್ಟು ಇಳಿಕೆಯಾಗಿದೆ ಹಾಗೂ ಎನ್‌ಇಪಿ ಗುರಿ ಕೇವಲ ‘ಜುಮ್ಲಾ’ ಎಂದು ಸಾಕ್ಷ್ಯಾಧಾರಗಳ ಸಮೇತ ವಿವರಿಸಿದೆ.

2025-2026ರ ಬಜೆಟ್ ಕುರಿತು ಪ್ರಕಟವಾಗಿರುವ ಇತರ ವರದಿಗಳಲ್ಲಿ, ಈ ಬಾರಿಯ ಬಜೆಟ್ ಹೆಚ್ಚಳವು “ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಕಡಿಮೆ ಬೆಳವಣಿಗೆ” ಎಂದು ತೀವ್ರವಾಗಿ ಟೀಕಿಸಲಾಗಿದೆ. ಅಮೆರಿಕ, ಚೀನಾದಂತಹ ದೇಶಗಳು ಜಿಡಿಪಿಯ ಶೇ. 6ರಷ್ಟು ಹಣವನ್ನು ಶಿಕ್ಷಣಕ್ಕೆ ವ್ಯಯಿಸುತ್ತಾ ಜಾಗತಿಕ ಮಟ್ಟದಲ್ಲಿ ಮುನ್ನುಗ್ಗುತ್ತಿದ್ದರೆ, ಭಾರತ ಮಾತ್ರ ಶೈಕ್ಷಣಿಕ ವೆಚ್ಚದಲ್ಲಿ ತೀರಾ ಹಿಂದುಳಿದಿದೆ. ಇದರ ಜೊತೆಗೆ, ಶಾಸಕಾಂಗದ ಸಂಶೋಧನಾ ವರದಿಗಳು ಬೆಟ್ಟುಮಾಡುವಂತೆ, ಶಿಕ್ಷಣಕ್ಕೆ ಮೀಸಲಿಟ್ಟ ಕಡಿಮೆ ಹಣವನ್ನು ಕೂಡ ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ; 2024-25ರಲ್ಲಿ ಮೀಸಲಿಟ್ಟಿದ್ದಕ್ಕಿಂತ ಕಡಿಮೆ ಹಣ ವೆಚ್ಚವಾಗಿದೆ.

delhi cjp

ಬಜೆಟ್ ಕುಸಿತದ ಪೆಟ್ಟು ಇಲಾಖಾವಾರು ಹಂಚಿಕೆಯ ಮೇಲೂ ತೀವ್ರವಾಗಿ ಬಿದ್ದಿದೆ. 12 ವರ್ಷಗಳ ಹಿಂದಿನ ಬಜೆಟ್‌ಗೆ ಹೋಲಿಸಿದರೆ ಶಾಲಾ ಶಿಕ್ಷಣ ಇಲಾಖೆಯ ಪಾಲು ಈಗ ಅರ್ಧಕ್ಕಿಂತ ಕಡಿಮೆಯಾಗಿದೆ. ಉನ್ನತ ಶಿಕ್ಷಣದ ಪಾಲು ಕೇವಲ ಶೇ. 60ರಷ್ಟಕ್ಕೆ ಕುಸಿದಿದೆ. ಇದಲ್ಲದೆ, ಕೃತಕ ಬುದ್ಧಿಮತ್ತೆಯಂತಹ (AI) ತಂತ್ರಜ್ಞಾನ ಬೆಳೆಯುತ್ತಿರುವ ಈ ಕಾಲದಲ್ಲಿ ಯುವಜನರಿಗೆ ಅಗತ್ಯವಿರುವ ಕೌಶಲ್ಯ ನೀಡುವ ‘ಸ್ಕಿಲ್ ಇಂಡಿಯಾ’ ಯೋಜನೆಯ ಕಥೆಯೂ ಶೋಚನೀಯವಾಗಿದೆ. ಕೌಶಲ್ಯಾಭಿವೃದ್ಧಿಗಾಗಿಯೇ 2015-16ರಲ್ಲಿ ಪ್ರತ್ಯೇಕ ಸಚಿವಾಲಯ ಸೃಷ್ಟಿಸಿದರೂ, ಒಟ್ಟು ಬಜೆಟ್‌ನಲ್ಲಿ ಅದರ ಪಾಲು ಆರಂಭದ ಶೇ. 0.06ರಿಂದ ಇದೀಗ ಶೇ. 0.05ಕ್ಕೆ ಇಳಿಕೆಯಾಗಿದೆ. ಇದು ಸರ್ಕಾರದ ಭವ್ಯ ಘೋಷಣೆಗಳಿಗೂ, ವಾಸ್ತವದ ಆರ್ಥಿಕ ಹಂಚಿಕೆಗೂ ಇರುವ ಅಜಗಜಾಂತರವನ್ನು ತೋರಿಸುತ್ತದೆ.

ದೇಶದ ಉನ್ನತ ಶಿಕ್ಷಣದ ಬೆನ್ನೆಲುಬಾಗಿರುವ ಸಾಮಾನ್ಯ ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ವಿಶ್ವವಿದ್ಯಾಲಯಗಳಿಗೆ ಆರ್ಥಿಕ ನೆರವು ನೀಡುವ ‘ವಿಶ್ವವಿದ್ಯಾಲಯ ಧನಸಹಾಯ ಆಯೋಗ’ಕ್ಕೆ (UGC) ನೀಡುವ ಅನುದಾನದಲ್ಲಿ ಒಂದೇ ವರ್ಷದಲ್ಲಿ ಬರೋಬ್ಬರಿ ಶೇ. 61ರಷ್ಟು ಬೃಹತ್ ಕಡಿತ ಮಾಡಲಾಗಿದೆ. ಮತ್ತೊಂದೆಡೆ ಕೇವಲ ಐಐಟಿ (IIT), ಐಐಎಂ (IIM) ಗಳಂತಹ ಗಣ್ಯ ಉನ್ನತ ಸಂಸ್ಥೆಗಳಿಗೆ ಹಾಗೂ ಆಯ್ದ ‘ಪಿಎಂಶ್ರೀ’ ಶಾಲೆಗಳಿಗೆ ಮಾತ್ರ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗುತ್ತಿದೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಅಸಮಾನತೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.

ಸರ್ಕಾರದ ಅನುದಾನ ಕಡಿತದಿಂದಾಗಿ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಉಸಿರುಗಟ್ಟುತ್ತಿವೆ. ಈ ಸಂಸ್ಥೆಗಳು ಅನಿವಾರ್ಯವಾಗಿ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ (HEFA) ಮೂಲಕ ಮೂಲಸೌಕರ್ಯ ಸಾಲ ಪಡೆಯುವ ದುಸ್ಥಿತಿಗೆ ತಳ್ಳಲ್ಪಟ್ಟಿವೆ. ಇದು ಅತ್ಯಂತ ಅಪಾಯಕಾರಿ ನಡೆಯಾಗಿದ್ದು, ಸಾಲದ ಸುಳಿಗೆ ಸಿಲುಕುತ್ತಿರುವ ವಿಶ್ವವಿದ್ಯಾಲಯಗಳು ಆ ಸಾಲದ ಕಂತು ಮತ್ತು ಬಡ್ಡಿಯನ್ನು ತೀರಿಸಲು ವಿದ್ಯಾರ್ಥಿಗಳ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುತ್ತಿವೆ. ಇದು ಪರೋಕ್ಷವಾಗಿ ಉನ್ನತ ಶಿಕ್ಷಣದ ವ್ಯಾಪಾರೀಕರಣ ಹಾಗೂ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿದಂತಾಗಿದ್ದು, ಗ್ರಾಮೀಣ, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಗಗನಕುಸುಮವಾಗಿಸುತ್ತಿದೆ.

ಶಾಲಾ ಶಿಕ್ಷಣದ ಪರಿಸ್ಥಿತಿಯೂ ಉನ್ನತ ಶಿಕ್ಷಣಕ್ಕಿಂತ ಭಿನ್ನವಾಗಿಲ್ಲ. ಹಲವು ವರದಿಗಳು ಬೆಟ್ಟುಮಾಡಿರುವಂತೆ, ಶಾಲಾ ಮಟ್ಟದಲ್ಲಿ ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರ ದಾಖಲಾತಿ ಕುಸಿಯುತ್ತಿದೆ. ಸಾಮಾನ್ಯ ಶಾಲೆಗಳಿಗೆ ಸೂಕ್ತ ಅನುದಾನ ನೀಡದೆ, ಕೇವಲ ‘ಪಿಎಂ-ಶ್ರೀ’ಯಂತಹ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಅಸಮಾನತೆಯಿಂದಾಗಿ ಪೋಷಕರು ಅನಿವಾರ್ಯವಾಗಿ ಸರ್ಕಾರಿ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡು ದುಬಾರಿ ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳತ್ತ ವಲಸೆ ಹೋಗುವಂತಹ ಅನಿವಾರ್ಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಕೋವಿಡ್ ನಂತರ ಅನುದಾನದ ಬಳಕೆ ತುಸು ಸುಧಾರಿಸಿದರೂ, ಶಾಲಾ ಶಿಕ್ಷಣದ ನೈಜ ಸಬಲೀಕರಣ ಮರೀಚಿಕೆಯಾಗಿಯೇ ಉಳಿದಿದೆ.

2020ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಅಗತ್ಯವಿರುವ ಯಾವುದೇ ಬೃಹತ್ ಅನುದಾನವನ್ನು ಈವರೆಗೆ ಮೀಸಲಿಟ್ಟಿಲ್ಲ. ಕೇವಲ ಕಾಗದದ ಮೇಲಿನ ಅಕ್ಷರಗಳಿಗಷ್ಟೇ ಸೀಮಿತವಾಗಿರುವ ಎನ್‌ಇಪಿ, ಆರ್ಥಿಕ ಬೆಂಬಲವಿಲ್ಲದೆ ನಿಸ್ತೇಜಗೊಂಡಿದೆ. ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರದ ಶಿಕ್ಷಣ ಬಜೆಟ್ ಕೇವಲ ನಾಮಮಾತ್ರದ ಅಂಕಿಗಳ ಗಾರುಡಿಯಲ್ಲಿ ಬೆಳೆದಂತೆ ಕಂಡರೂ, ವಾಸ್ತವದಲ್ಲಿ ಜಿಡಿಪಿ ಮತ್ತು ಒಟ್ಟು ಬಜೆಟ್ ಹಂಚಿಕೆಯ ಲೆಕ್ಕಾಚಾರದಲ್ಲಿ ಪಾತಾಳಕ್ಕಿಳಿದಿರುವುದು ನಗ್ನ ಸತ್ಯ. ಪ್ರಸ್ತುತ ಬೀದಿಯಲ್ಲಿ ಕೇಳಿಬರುತ್ತಿರುವ ಆಕ್ರೋಶ ಈ ಆರ್ಥಿಕ ಶೋಷಣೆಯ ನೇರ ಪರಿಣಾಮವಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಈ ಪ್ರವೃತ್ತಿ ದೇಶದ ಭವಿಷ್ಯಕ್ಕೆ ಮಾರಕ. ಶಿಕ್ಷಣ ಕ್ಷೇತ್ರಕ್ಕೆ ಎಸಗುತ್ತಿರುವ ಈ ಐತಿಹಾಸಿಕ ಅನ್ಯಾಯವನ್ನು ಈಗಲೇ ಸರಿಪಡಿಸದಿದ್ದರೆ, ಮುಂದಿನ ತಲೆಮಾರು ಭಾರೀ ಬೆಲೆ ತೆರಬೇಕಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...