ಕರ್ನಾಟಕದಿಂದ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ವಾಹನವು ಅಪಘಾತಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ಇಂಧೋರ್ ಬಳಿ ನಡೆದಿದೆ. ದುರ್ಘಟನೆಯಲ್ಲಿ ಬೆಳಗಾವಿಯ ನಾಲ್ವರು ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ 19 ಮಂದಿ ಟೆಂಪೋ ಟ್ರಾವೆಲ್ ವಾಹನದಲ್ಲಿ ಕುಂಭಮೇಳಕ್ಕೆ ತೆರಳಿದ್ದರು. ಕುಂಭಮೇಳದಲ್ಲಿ ಧಾರ್ಮಿಕ ಸ್ನಾನ, ಪೂಜೆ ಮುಗಿಸಿ, ತಮ್ಮೂರಿಗೆ ಮರಳುತ್ತಿದ್ದರು. ಈ ವೇಳೆ, ಇಂಧೋರ್ ಬಳಿ ಅವರಿದ್ದ ವಾಹನ ಲಾರಿಗೆ ಡಿಕ್ಕಿ ಹೊಡೆದಿದೆ. ಅದೇ ಸಮಯಕ್ಕೆ ಪಕ್ಕದಲ್ಲಿ ತೆರಳುತ್ತಿದ್ದ ಬೈಕ್‌ಗೂ ಡಿಕ್ಕಿಯಾಗಿದೆ. ಭೀಕರ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಟೆಂಪೊದಲ್ಲಿದ್ದ ನಾಲ್ಕು ಮಂದಿ ಮತ್ತು ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟೆಂಪೊದಲ್ಲಿದ್ದ ಉಳಿದ 15 ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರಲ್ಲಿ ನಾಲ್ವರು ಬೆಳಗಾವಿಯ ಶಹಾಪುರ ನಿವಾಸಿಗಳು ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ತೆರಳುತ್ತಿದ್ದವರ ಗುರುತು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.