ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸನ್ಯಾಸಿ, ಕಾರ್ತಿಕ್ ಮಹಾರಾಜ್ ಎಂದೇ ಪಶ್ಚಿಮ ಬಂಗಾಳದಲ್ಲಿ ಹೆಸರಾಗಿರುವ ಸ್ವಾಮಿ ಪ್ರದೀಪ್ತಾನಂದ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.
ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ 2013ರ ಜನವರಿಯಿಂದ ಜೂನ್ ನಡುವೆ 6 ತಿಂಗಳಲ್ಲಿ 12 ಬಾರಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯ ಭಾರತ್ ಸೇವಾಶ್ರಮ ಸಂಘದ ಬೆಲ್ದಂಗಾ ಘಟಕದೊಂದಿಗೆ ಸಂಬಂಧ ಹೊಂದಿರುವ ಸಾಧು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನನ್ನ ಹೆಸರು ಮತ್ತು ಖ್ಯಾತಿಗೆ ಕಳಂಕ ತರುವ ಪಿತೂರಿ ಇದು ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಈ ಸ್ವಾಮೀಜಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ 2024ರಲ್ಲಿ ಮಮತಾ ಬ್ಯಾನರ್ಜಿ ಕೂಡ ಆರೋಪ ಮಾಡಿದ್ದರು. ಕಾರ್ತಿಕ್ ಮಹಾರಾಜ್ ಸ್ವಾಮೀಜಿ ಬಿಜೆಪಿ ಜೊತೆ ಸೇರಿ ಟಿಎಂಸಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಈ ಆರೋಪದ ವಿರುದ್ಧ ಮಮತಾ ಅವರಿಗೆ ಸ್ವಾಮೀಜಿ ನ್ಯಾಯಾಲಯದಿಂದ ನೋಟಿಸ್ ಕೂಡ ನೀಡಿದ್ದರು.
ಕೆಲ ದಿನಗಳ ಹಿಂದೆ ಕೋಲ್ಕತ್ತಾದ ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಕಾಲೇಜಿನ ಸಿಬ್ಬಂದಿ ನಡೆಸಿದ ಅತ್ಯಾಚಾರ ಪ್ರಕರಣ ಹೆಚ್ಚು ಸುದ್ದಿಯಾಗಿತ್ತು. ಕಳೆದ ವರ್ಷ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.