ಪರೀಕ್ಷೆಗಳಲ್ಲಿ ಎಲ್ಲ ಪ್ರಶ್ನೆಗಳಿಗೆ ಅತ್ಯುತ್ತಮವಾಗಿ ಉತ್ತರಿಸಿದ ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ನೀಡಿರುವುದನ್ನು ನೋಡಿದ್ದೇವೆ. ಆದರೆ ಬಿಹಾರದ ಮುಜಫರ್‌ಪುರದಲ್ಲಿರುವ ಬಿಆರ್‌ಎಯು ವಿವಿಯಲ್ಲಿ 100 ಅಂಕಗಳಿಗೆ 257 ಅಂಕ ನೀಡಲಾಗಿದೆ.
ಅದೆ ರೀತಿ ಸ್ನಾತಕೋತ್ತರ (ಪಿಜಿ) ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗೆ 100 ಅಂಕಗಳ ಪರೀಕ್ಷೆಯಲ್ಲಿ 257 ಅಂಕಗಳನ್ನು ನೀಡಲಾಗಿದೆ. ಹಾಗೆಯೇ ಇನ್ನೊಂದು ಪರೀಕ್ಷೆಯಲ್ಲೂ ಇದೇ ರೀತಿ ಅಂಕಗಳನ್ನು ನೀಡಲಾಗಿದೆ.
ಕೇವಲ 30 ಅಂಕಗಳನ್ನು ಹೊಂದಿರುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ 225 ಅಂಕಗಳನ್ನು ನೀಡಲಾಗಿದೆ. ಈ ದೋಷಗಳನ್ನು ನೋಡಿ ಅನೇಕ ವಿದ್ಯಾರ್ಥಿಗಳು ಗೊಂದಲಕ್ಕೀಡಾದರೆ, ಕೆಲವರಿಗೆ ಮಾತ್ರ ಈ ರೀತಿ ಅಂಕ ನೀಡಿರುವುದನ್ನು ನೋಡಿ ನಮಗ್ಯಾಕೆ ಕಡಿಮೆ ಅಂಕ ನೀಡಲಾಗಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ.
ಈ ವಿವಾದ ಒಂದು ಕಡೆಯಾದರೆ, ಯಾವುದೇ ಕಾರಣ ನೀಡದೇ ಕೆಲವು ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ತಡೆಹಿಡಿಯಲಾಗಿದೆ. ಇನ್ನು ಕೆಲವರು ಎಲ್ಲ ಪರೀಕ್ಷೆಗಳಿಗೆ ಹಾಜರಾಗಿ ಉತ್ತಮವಾಗಿ ಪರೀಕ್ಷೆ ಬರೆದಿದ್ದರೂ ಅವರನ್ನು ಅನುತ್ತೀರ್ಣಗೊಳಿಸಲಾಗಿದೆ. ಇದನ್ನೆಲ್ಲ ನೋಡಿ ಗಾಬರಿಯಾಗಿರುವ ವಿದ್ಯಾರ್ಥಿಗಳು ಇದೀಗ ವಿವಿಯ ಕಚೇರಿಗೆ ಭೇಟಿ ನೀಡಿ ತಪ್ಪುಗಳನ್ನು ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ
ಬಿಹಾರ ವಿವಿಯಲ್ಲಿ ಈ ರೀತಿ ತಪ್ಪುಗಳಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಹಲವು ಬಾರಿ ವಿವಿಧ ಸಂದರ್ಭಗಳಲ್ಲಿ ತಪ್ಪುಗಳನ್ನು ಆಗುತ್ತಲೇ ಇವೆ.
ಹಿಂದೆ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಪರಿಶೀಲನೆ, ಅಂಕಗಳ ಸೇರ್ಪಡೆ ಮತ್ತು ಫಲಿತಾಂಶಗಳನ್ನು ಪ್ರಕಟಿಸುವಲ್ಲಿ ನಿರ್ಲಕ್ಷ್ಯ ತೋರಿದ ಬಗ್ಗೆ ದೂರುಗಳು ಬಂದಿತ್ತು. ಪದೇ ಪದೇ ತಪ್ಪುಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಇದೆಲ್ಲ ಸಣ್ಣ ತಪ್ಪುಗಳು ಎಂದು ವಿವಿ ಆಡಳಿತ ಮಂಡಳಿ ಬೇಜವಾಬ್ದಾರಿ ಉತ್ತರ ನೀಡಿತ್ತು. ಇದೀಗ ಈ ಅಂಕ ವಿವಾದದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಪರೀಕ್ಷಾ ನಿಯಂತ್ರಕ ಪ್ರೊಫೆಸರ್ ರಾಮ್ ಕುಮಾರ್, ಈ ವಿಷಯವು ನಮ್ಮ ಗಮನಕ್ಕೆ ಬಂದಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿ ಸುಮ್ಮನಾಗಿದ್ದಾರೆ.
ಎಕ್ಸೆಲ್ ಶೀಟ್‌ಗೆ ಅಂಕಗಳನ್ನು ನಮೂದಿಸುವಾಗ ಒಮ್ಮೊಮ್ಮೆ ತಪ್ಪುಗಳಾಗುತ್ತವೆ. ತೊಂದರೆಗೊಳಗಾದ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸರಿಪಡಿಸಲಾಗಿದೆ. ಈ ತಪ್ಪು ಮಾಡಿದ ಕಂಪ್ಯೂಟರ್ ಆಪರೇಟರ್‌ಗೆ ಎಚ್ಚರಿಕೆ ನೀಡಿದ್ದೇವೆ. ಎರಡೆರಡು ಬಾರಿ ಅಂಕಗಳನ್ನು ಪರಿಶೀಲಿಸಲು ಸೂಚಿಸಿದ್ದೇವೆ ಎಂದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹೇಳಿಕೆಯನ್ನು ಅಧಿಕಾರಿಗಳು ನೀಡುತ್ತಿದ್ದಾರೆ.
