ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಐತಿಹಾಸಿಕ ‘ಭಾರತ್ ಜೋಡೋ ಯಾತ್ರೆ’ ಆರಂಭವಾಗಿ ನಾಲ್ಕು ವರ್ಷಗಳು ಪೂರೈಸಿದೆ. ಕಾಂಗ್ರೆಸ್ ಪಕ್ಷವು ಈ ಯಾತ್ರೆಯನ್ನು ಭಾರತೀಯ ರಾಜಕೀಯದಲ್ಲಿ ಒಂದು ‘ನಿರ್ಣಾಯಕ ತಿರುವು’ ಎಂದು ಬಣ್ಣಿಸಿದೆ.
ಈ ಕುರಿತು ಸೋಮವಾರ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಿಂದ ಆರಂಭವಾದ ಈ ಸುದೀರ್ಘ ಪಾದಯಾತ್ರೆಯು ದೇಶದ ರಾಜಕೀಯ ಮತ್ತು ಸಾಮಾಜಿಕ ವಾತಾವರಣಕ್ಕೆ ಹೊಸ ಭರವಸೆ ಹಾಗೂ ಶಕ್ತಿಯನ್ನು ತುಂಬಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂನಲ್ಲಿ ದ್ವೇಷದ ರಾಜಕಾರಣದ ನಡುವೆ ಸೌಹಾರ್ದದ ಗಾಳಿ: ಕಾಂಗ್ರೆಸ್ ಗೆಲ್ಲಿಸುವರೇ ಗೌರವ್?
“ಈ ಯಾತ್ರೆಯು ಕೇವಲ ಒಂದು ರಾಜಕೀಯ ಪ್ರಚಾರವಾಗಿರಲಿಲ್ಲ, ಬದಲಾಗಿ ಬಿಜೆಪಿಯ ಆಡಳಿತದಲ್ಲಿ ಸಂವಿಧಾನದ ಮೌಲ್ಯಗಳು, ಆಚರಣೆಗಳು ಮತ್ತು ತತ್ವಗಳ ಮೇಲಾಗುತ್ತಿದ್ದ ದಾಳಿಯ ವಿರುದ್ಧದ ವೈಚಾರಿಕ ಸವಾಲಾಗಿತ್ತು” ಎಂದು ಅವರು ನೆನಪಿಸಿಕೊಂಡಿದ್ದಾರೆ. “ಇದು ಭಾಷಣ ಮಾಡುವ ‘ಮನ್ ಕಿ ಬಾತ್’ ಆಗಿರಲಿಲ್ಲ, ಬದಲಾಗಿ ಜನರ ಸಮಸ್ಯೆಗಳನ್ನು ಆಲಿಸುವ ‘ಜನತಾ ಕಿ ಚಿಂತಾ’ ಆಗಿತ್ತು” ಎಂದು ಜೈರಾಮ್ ರಮೇಶ್ ಮಾರ್ಮಿಕವಾಗಿ ಉಲ್ಲೇಖಿಸಿದ್ದಾರೆ.
2022ರ ಸೆಪ್ಟೆಂಬರ್ 7,ರಂದು ಆರಂಭಗೊಂಡಿದ್ದ ಈ ಪಾದಯಾತ್ರೆಯು 145 ದಿನಗಳ ಕಾಲ ಸುಮಾರು 4,080 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ದೂರ ಕ್ರಮಿಸಿ, 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದು ಶ್ರೀನಗರದಲ್ಲಿ ಮುಕ್ತಾಯಗೊಂಡಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಾಮಾಜಿಕ ಧ್ರುವೀಕರಣದ ವಿರುದ್ಧ ಧ್ವನಿ ಎತ್ತಲು ಲಕ್ಷಾಂತರ ನಾಗರಿಕರು ಹಾಗೂ ಹಿರಿಯ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ನಾಯಕರ ಪ್ರಕಾರ, ಈ ಯಾತ್ರೆಯು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದ್ದಲ್ಲದೆ, ಲೋಕಸಭೆಯ ಪ್ರತಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಅವರ ರಾಜಕೀಯ ಬಿಂಬವನ್ನು ಸಾರ್ವಜನಿಕರಲ್ಲಿ ಮರುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.





