ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಅಡಿಯಲ್ಲಿ ಬಂಧನಕ್ಕೊಳಗಾಗಿ ಹಲವು ವರ್ಷಗಳಿಂದ ಜೈಲಿನಲ್ಲಿದ್ದ ಮಾನವ ಹಕ್ಕುಗಳ ಹೋರಾಟಗಾರ ರೋನಾ ವಿಲ್ಸನ್ ಮತ್ತು ಸುಧೀರ್ ಧವಳೆ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ವಿಲ್ಸನ್ ಮತ್ತು ಸುಧೀರ್ ಧವಳೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಎಸ್ ಗಡ್ಕರಿ ಮತ್ತು ನ್ಯಾಯಮೂರ್ತಿ ಕಮಲ್ ಖಾತಾ ಅವರಿದ್ದ ಪೀಠವು ದೀರ್ಘಕಾಲದ ಸೆರೆವಾಸ, ಅಂತಿಮ ಚಾರ್ಜ್ಶೀಟ್ ಸಲ್ಲಿಸುವಲ್ಲಿ ತನಿಖಾಧಿಕಾರಿಗಳ ವೈಫಲ್ಯ ಹಾಗೂ 300ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಯ ಅಂಶಗಳನ್ನು ಪರಿಗಣಿಸಿ ಜಾಮೀನು ನೀಡಿದೆ. ಪ್ರತಿ ಸೋಮವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮುಂದೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದೆ.
2018ರ ಜನವರಿ 1ರಂದು ಭೀಮಾ ಕೋರೆಗಾಂವ್ ಯುದ್ಧದ 200ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಗಾಗಿ ‘ಎಲ್ಗರ್ ಪರಿಷತ್’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ಕೆಲವು ದುಷ್ಕರ್ಮಿಗಳು ಹಿಂಸಾಚಾರ ನಡೆಸಿದ್ದರು. ಆದರೆ, ಕಾರ್ಯಕ್ರಮವನ್ನು ಆಯೋಜಿಸಿದ್ದವರ ವಿರುದ್ಧವೇ ಕಠಿಣ ಎಯುಪಿಎ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು. ವಿಲ್ಸನ್ ಮತ್ತು ಧವಳೆ ಸೇರಿದಂತೆ 16 ಕಾರ್ಯಕರ್ತರು ಜೈಲು ಪಾಲಾಗಿದ್ದರು. ಅವರಲ್ಲಿ, ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರು ಜೈಲಿನಲ್ಲಿ ಸರಿಯಾದ ಮೂಲಸೌಕರ್ಯಗಳು ಹಾಗೂ ಆರೋಗ್ಯ ಸೌಲಭ್ಯ ದೊರೆಯದೆ 2021ರ ಜುಲೈ 5ರಂದು ಜೈಲಿನಲ್ಲಿಯೇ ಸಾವನ್ನಪ್ಪಿದ್ದರು.
ಎಲ್ಗರ್ ಪರಿಷತ್ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ಕಾರ್ಯಕ್ರಮದ ಆಯೋಜಕರಾಗಿದ್ದ ಸುಧಾ ಭಾರದ್ವಾಜ್, ಅರುಣ್ ಫೆರೇರಾ, ಸುರೇಂದ್ರ ಗಡ್ಲಿಂಗ್, ಮಹೇಶ್ ರಾವುತ್, ಶೋಮಾ ಸೇನ್, ರೋನಾ ವಿಲ್ಸನ್, ಸುಧೀರ್ ಧವಳೆ, ವೆರ್ನಾನ್ ಗೊನ್ಸಾಲ್ವಿಸ್, ವರವರ ರಾವ್, ಗೌತಮ್ ನವ್ಲಾಖಾ, ಆನಂದ್ ತೇಲ್ತುಂಬ್ಡೆ, ಹನಿ ಬಾಬು, ಸ್ಟ್ಯಾನ್ ಸ್ವಾಮಿ, ಸಾಗರ್ ತಾತ್ಯಾರಾವ್ ಗೋರಖೆ, ರಮೇಶ್ ಮುರಳೀಧರ್ ಗೈಚೋರ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಲಾಗಿತ್ತು.
ರೋನಾ ವಿಲ್ಸನ್ ಅವರು ರಾಜಕೀಯ ಖೈದಿಗಳ ಬಿಡುಗಡೆ ಸಮಿತಿಯ ಸದಸ್ಯರಾಗಿದ್ದರು. ಅವರನ್ನು ಎಲ್ಗರ್ ಪರಿಷತ್ ವೇಳೆ ನಡೆದ ಗಲಭೆ ಪ್ರಕರಣದಲ್ಲಿ 2018ರ ಜೂನ್ 6ರಂದು ಬಂಧಿಸಲಾಗಿತ್ತು. ಬಳಿಕ, ಅವರು ಮಾವೋವಾದಿ ಹೋರಾಟಗಾರರೊಂದಿಗೆ ಸಂಬಂಧ ಹೊಂದಿದ್ದಾರೆ. ಪ್ರಧಾನಿ ಮೋದಿಯ ಹತ್ಯೆಗೆ ಸಂಚು ಎಣೆಯುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.