ನಕಲಿ ವೈದ್ಯನೊಬ್ಬ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಸರ್ಜರಿ ಮಾಡಿದ ಪರಿಣಾಮ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಸರನ್ ಎಂಬಲ್ಲಿ ನಕಲಿ ವೈದ್ಯ ಯೂಟ್ಯೂಬ್ ವಿಡಿಯೋವನ್ನು ಅನುಸರಿಸಿ ಬಾಲಕನ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕೆ ಆಪರೇಷನ್ ಮಾಡಿದ್ದಾನೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬಾಲಕನನ್ನು ಪಾಟ್ನಾದ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದು, ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ವೈದ್ಯರು ಹಾಗೂ ಆತನ ಜೊತೆಗಿದ್ದವರು ಪರಾರಿಯಾಗಿದ್ದಾರೆ.
ಬಾಲಕನು ಪದೇ ಪದೇ ವಾಂತಿ ಮಾಡುತ್ತಿದ್ದ. ಆದ್ದರಿಂದ ಆತನನ್ನು ಸರನ್ ನಗರದಲ್ಲಿರುವ ಗಣಪತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾಂತಿ ನಿಂತಿತ್ತು. ಆದರೆ ವೈದ್ಯ ಅಜಿತ್ ಕುಮಾರ್ ಪುರಿ ಈತನಿಗೆ ಆಪರೇಷನ್ ಅಗತ್ಯವಿದೆ ಎಂದಿದ್ದ. ಆದರೆ ಆತ ಯೂಟ್ಯೂಬ್ ವಿಡಿಯೋವನ್ನು ನೋಡಿ ಆಪರೇಷನ್ ಮಾಡಿದ್ದರಿಂದ ನನ್ನ ಮಗ ಜೀವ ಕಳೆದುಕೊಂಡ ಎಂದು ಬಾಲಕನ ತಂದೆ ಚಂದನ್ ಶಾ ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ವಿನೇಶ್ ಫೋಗಟ್ ಪಕ್ಷ ರಾಜಕಾರಣ ಮಾಡಿದರೆ ಆಕೆ ಎತ್ತಿದ ಪ್ರಶ್ನೆಗಳು ಸುಳ್ಳಾಗವು
ಮೃತ ಬಾಲಕನ ತಾತ ಮಾತನಾಡಿ, ಬಾಲಕನ ತಂದೆಯನ್ನು ಬೇರೆ ಕೆಲಸದ ಮೇರೆಗೆ ಹೊರಗಡೆ ಕಳುಹಿಸಿದ್ದರು. ಕುಟುಂಬದವರ ಅನುಮತಿ ಪಡೆಯದೇ ಆಸ್ಪತ್ರೆಯವರು ಬಾಲಕನನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡಿದ್ದಾರೆ. ಬಾಲಕ ನೋವಿನಿಂದ ಕಿರುಚಿದ್ದನ್ನು ನೋಡಿ ಏನಾಯಿತು ಎಂದು ವೈದ್ಯರನ್ನು ಪ್ರಶ್ನಿಸಿದರೆ, ನಾವು ವೈದ್ಯರು ಎಂದು ದರ್ಪ ತೋರಿದ್ದರು. ಸಂಜೆಯ ಸುಮಾರಿಗೆ ಬಾಲಕನ ಶವವನ್ನು ಆಸ್ಪತ್ರೆಯ ಮೆಟ್ಟಿಲಲ್ಲಿ ಇಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.
ಈ ಘಟನೆಯ ಕುರಿತಾಗಿ ಪೊಲೀಸರು ವೈದ್ಯರ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ವೈದ್ಯ ಮತ್ತು ಆತನ ತಂಡವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.
