ತಾನು ಮಾಡಿದ ಕೆಲಸಕ್ಕೆ ಬಾಕಿಯಿರುವ ಸಂಬಳ ಕೇಳಿದ ಕಾರಣಕ್ಕೆ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಅಮಾನುಷವಾಗಿ ಹಲ್ಲೆ ನಡೆಸಿ ಮೂತ್ರ ವಿಸರ್ಜನೆ ಮಾಡಿರುವ ಕೃತ್ಯ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ.
ದಲಿತ ವ್ಯಕ್ತಿಯೊಬ್ಬರು ಕೋಳಿ ಫಾರಂನಲ್ಲಿ ತಾನು ಮಾಡಿದ ಕೆಲಸಕ್ಕೆ ಬಾಕಿಯಿರುವ ಸಂಬಳವನ್ನು ಕೇಳಿದ್ದಕ್ಕಾಗಿ ಮಾಲೀಕ ತಂದೆ, ಆತನ ಮಗ ಸೇರಿ ಹಲ್ಲೆ ಮಾಡಿ ಮುಖಕ್ಕೆ ಉಗಿದು ಮೂತ್ರ ವಿಸರ್ಜಸಿ ಅಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಸಂತ್ರಸ್ತ ಕಾರ್ಮಿಕ ರಿಂಕು ಮಾಂಝಿ ಎಂಬುವವರು ಅಕ್ಟೋಬರ್ 4 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.
ರಿಂಕು ಮಾಂಝಿ ಅವರು ತಾನು ಮಾಡಿದ ಕೆಲಸಕ್ಕೆ ವೇತನ ಕೇಳಿದಾಗ ಸಿಟ್ಟಿಗೆದ್ದ ಕೋಳಿ ಫಾರಂ ಮಾಲೀಕ ರಮೇಶ್ ಪಟೇಲ್, ಆತನ ಸಹೋದರ ಅರುಣ್ ಪಟೇಲ್ ಮತ್ತು ಆತನ ಮಗ ಗೌರವ್ ಕುಮಾರ್ ಸೇರಿಕೊಂಡು ರಿಂಕು ಮಾಂಝಿಗೆ ಮನಬಂದಂತೆ ಥಳಿಸಿದ್ದಾರೆ. ರಮೇಶ್ ಪಟೇಲ್ ಮತ್ತು ಆತನ ಮಗ ಗೌರವ್ ಕುಮಾರ್ ಸಂತ್ರಸ್ತನ ಮೇಲೆ ಮೂತ್ರ ವಿಸರ್ಜಸಿದ್ದಲ್ಲದೇ, ಮುಖದ ಮೇಲೆ ಉಗಿದು ವಿಕೃತಿ ಮೆರೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!
ಸಂತ್ರಸ್ತ ರಿಂಕು ಮಾಂಝಿ ಅವರು ಅಕ್ಟೋಬರ್ 8 ರಂದು ಸಲ್ಲಿಸಿದ ದೂರಿನ ಜೊತೆಗೆ ಆರೋಪಿಯ ವಿರುದ್ಧ ಸಾಕ್ಷ್ಯವಾಗಿ ಕೃತ್ಯಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ದೂರನ್ನು ಸ್ವೀಕರಿಸಿದ ನಂತರ, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಮುಜಾಫರ್ಪುರದ ಪೊಲೀಸ್ ವರಿಷ್ಠಾಧಿಕಾರಿ ವಿಧಾ ಸಾಗರ್, ‘ಕರ್ಪೂರ್ ಉತ್ತರದಲ್ಲಿ ವಾಸಿಸುವ ರಮೇಶ್ ಪಟೇಲ್ ಎಂಬಾತ ದಿನಗೂಲಿ ಕಾರ್ಮಿಕರನ್ನು ಜಾತಿ ನಿಂದನೆ ಮಾತುಗಳಿಂದ ನಿಂದಿಸಿದ್ದಾರೆ. ರಿಂಕು ಎಂಬುವವರು ರಮೇಶ್ ಅವರ ಸ್ಥಳದಲ್ಲಿ ಕೆಲಸ ಮಾಡಿದ್ದರು. ಅವರು ತಮ್ಮ ವೇತನವನ್ನು ಕೇಳಿದಾಗ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಮುಜಾಫರ್ಪುರದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಮೋಟಾರ್ಸೈಕಲ್ ಕದ್ದಿದ್ದಾರೆ ಎಂಬ ಆರೋಪಿಸಿ ಇಬ್ಬರು ದಲಿತರನ್ನು ಕೆಲವರು ಹೀನಾಯವಾಗಿ ಥಳಿಸಿ ಮೂತ್ರ ವಿಸರ್ಜಸಿದ್ದರು. ಸಂತ್ರಸ್ತರು ಗ್ರಾಮೀಣ ಜಾತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಘಟನೆಯ ನಂತರ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.