ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬಿಹಾರ ಸರ್ಕಾರ ತನ್ನ ಆದಾಯದ ಮೂಲಗಳನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಗ್ರಾಮೀಣ ಭಾಗಗಳಲ್ಲಿ ತೆರಿಗೆ ವಸೂಲಿಯನ್ನು ಕಡ್ಡಾಯಗೊಳಿಸಿದೆ.
ಇತ್ತೀಚೆಗಷ್ಟೇ ರಾಜ್ಯ ಹೆದ್ದಾರಿಗಳಲ್ಲಿನ ವಾಣಿಜ್ಯ ವಾಹನಗಳಿಂದ ಟೋಲ್ ಸಂಗ್ರಹಿಸುವ ನಿರ್ಧಾರ ಕೈಗೊಂಡಿದ್ದ ಬಿಹಾರ ಸರ್ಕಾರವು, ಇದೀಗ ಗ್ರಾಮ ಪಂಚಾಯಿತಿಗಳ ಮೂಲಕ ಮನೆಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಮೇಲೆ ‘ಹೋಲ್ಡಿಂಗ್ ಟ್ಯಾಕ್ಸ್’ ಅಥವಾ ಆಸ್ತಿ ತೆರಿಗೆಯನ್ನು ವಿಧಿಸಲು ಮುಂದಾಗಿದೆ. ಸರ್ಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಗ್ರಾಮ ಪಂಚಾಯಿತಿ ತೆರಿಗೆಗಳು, ದರಗಳು ಮತ್ತು ಶುಲ್ಕಗಳ ನಿಯಮಗಳು-2026’ಕ್ಕೆ ಅಂಕಿತ ಹಾಕುವ ಮೂಲಕ ಈ ಬದಲಾವಣೆಗೆ ಅಧಿಕೃತ ಚಾಲನೆ ನೀಡಿದೆ.
ಹೊಸ ನಿಯಮದ ಪ್ರಕಾರ, ಬಿಹಾರದ ಒಟ್ಟು 45,000ಕ್ಕೂ ಹೆಚ್ಚು ಕಂದಾಯ ಗ್ರಾಮಗಳಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಮೇಲೆ ತೆರಿಗೆಯನ್ನು ನಿಗದಿಪಡಿಸಲಾಗಿದೆ. ಕಚ್ಚಾ ಮನೆಗಳನ್ನು ತೆರಿಗೆ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಅದೇ ರೀತಿ, ಪಕ್ಕಾ ಮನೆಗಳಿಗೆ ವರ್ಷಕ್ಕೆ 100 ರೂಪಾಯಿ ಮತ್ತು ಅರೆ-ಪಕ್ಕಾ ಮನೆಗಳಿಗೆ ವರ್ಷಕ್ಕೆ 50 ರೂಪಾಯಿ ತೆರಿಗೆಯನ್ನು ನಿಗದಿಪಡಿಸಲಾಗಿದೆ. ವಿಶೇಷವಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾದ ಮನೆಗಳಿಗೆ ಕೇವಲ 25 ರೂಪಾಯಿಗಳ ರಿಯಾಯಿತಿ ದರ ವಿಧಿಸಲಾಗುವುದು. ಕೇವಲ ವಸತಿ ಮನೆಗಳಷ್ಟೇ ಅಲ್ಲದೆ, ಪೆಟ್ರೋಲ್ ಪಂಪ್ಗಳು, ಎಲ್ಪಿಜಿ ಏಜೆನ್ಸಿಗಳು, ಸಿನೆಮಾ ಮಂದಿರಗಳು ಮತ್ತು ಇಟ್ಟಿಗೆ ಗೂಡುಗಳಂತಹ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳ ಮೇಲೆ ವಾರ್ಷಿಕ 5,000 ರೂಪಾಯಿಗಳ ನಿರ್ದಿಷ್ಟ ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಈ ತೆರಿಗೆ ಸಂಗ್ರಹಣೆಯ ಹಿಂದಿನ ಮುಖ್ಯ ಉದ್ದೇಶ ಸ್ಥಳೀಯ ಆಡಳಿತವನ್ನು ಆರ್ಥಿಕವಾಗಿ ಸದೃಢಗೊಳಿಸುವುದಾಗಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಗಳು ರಾಜ್ಯ ಸರ್ಕಾರದ ಅನುದಾನವನ್ನೇ ನಂಬಿ ಕೂರದಂತೆ, ತಮ್ಮದೇ ಆದ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದಿದೆ ಸರ್ಕಾರ. ಹೀಗೆ ಸಂಗ್ರಹವಾಗುವ ಹಣವನ್ನು ಕೇವಲ ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರಿನ ಸೌಲಭ್ಯಗಳಂತಹ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಬೇಕೆಂದು ಸೂಚನೆ ನೀಡಲಾಗಿದೆ.
ಈ ಕ್ರಮದ ಮೂಲಕ ಸರ್ಕಾರ ವಾರ್ಷಿಕ 1,300 ಕೋಟಿ ರೂಪಾಯಿಗಳ ಆದಾಯವನ್ನು ಗ್ರಾಮೀಣ ಭಾಗದಿಂದಲೇ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಬಿಹಾರದ ಒಟ್ಟು ಬಜೆಟ್ ಗಾತ್ರವು ಸುಮಾರು 3.5 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದರೆ, ರಾಜ್ಯದ ಆಂತರಿಕ ಆದಾಯ ಕೇವಲ 60,000 ಕೋಟಿ ರೂಪಾಯಿಗಳಷ್ಟಿದೆ. ಇದರೊಂದಿಗೆ ಸುಮಾರು 4 ಲಕ್ಷ ಕೋಟಿ ರೂಪಾಯಿಗಳ ಸಾಲದ ಹೊರೆಯೂ ರಾಜ್ಯದ ಮೇಲಿದೆ. ಹೀಗಾಗಿ, 2028ರ ವೇಳೆಗೆ ರಾಜ್ಯದ ಆಂತರಿಕ ಆದಾಯವನ್ನು 1 ಲಕ್ಷ ಕೋಟಿ ರೂಪಾಯಿಗೆ ಏರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಇದನ್ನೂ ಓದಿ: ಬುಲ್ಡೋಜರ್ ನ್ಯಾಯ | ನಿಯಮ ಉಲ್ಲಂಘಿಸಿ ಒತ್ತುವರಿ ಮಾಡಿದರೆ ಬುಲ್ಡೋಜರ್ ಉರುಳಲೇಬೇಕು: ಸುಪ್ರೀಂ ಕೋರ್ಟ್
ನೀತಿ ಆಯೋಗದ ಶಿಫಾರಸುಗಳು ಮತ್ತು ಕೇಂದ್ರ ಹಣಕಾಸು ಆಯೋಗದ ಮಾರ್ಗದರ್ಶನದ ಮೇರೆಗೆ ಈ ಸುಧಾರಣೆಯನ್ನು ಜಾರಿಗೆ ತರಲಾಗುತ್ತಿದ್ದು, ಇದು ಗ್ರಾಮ ಪಂಚಾಯಿತಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ದೂರದೃಷ್ಟಿಯ ಹೆಜ್ಜೆಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ವಿರೋಧ ಪಕ್ಷಗಳು ಮತ್ತು ಗುತ್ತಿಗೆದಾರರ ಸಂಘವು ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ, ಸರ್ಕಾರವು ಈ ನಿರ್ಧಾರ ಪ್ರಕಟಿಸಿದೆ. ಸರ್ಕಾರಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಹಣದ ಮೊತ್ತವೇ 50,000 ಕೋಟಿ ರೂಪಾಯಿಗಳಿಗೂ ಮೀರಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದಾಗ್ಯೂ, ಸರ್ಕಾರ ಈ ಆರ್ಥಿಕ ಬಿಕ್ಕಟ್ಟನ್ನು ತಾತ್ಕಾಲಿಕ ಎಂದು ಬಣ್ಣಿಸಿದ್ದು, ಸುಧಾರಣಾ ಕ್ರಮಗಳ ಮೂಲಕ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಪ್ರಯತ್ನದಲ್ಲಿ ತೊಡಗಿದೆ.




