ಬಿಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ಗಂಗಾ ನದಿ ತುಂಬಿ ಹರಿಯುತ್ತಿದೆ. ಭಾಗಲ್ಪುರ ಜಿಲ್ಲೆಯಲ್ಲಿ ಸೇತುವೆಯೊಂದು ಮುಳುಗಡೆಯಾಗಿದೆ. ಜಿಲ್ಲೆಯ ಸುಲ್ತಂಗಂಜ್ ಮತ್ತು ರತನ್‌ಪುರ ಮೂಲಕ ಸಂಚರಿಸುವ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಅವುಗಳ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭಾಗಲ್ಪುರ್ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಜಿಲ್ಲೆಯ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಆವರಣಕ್ಕೆ ನೀರು ನುಗ್ಗಿದೆ. ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ರಾಷ್ಟ್ರೀಯ ಹೆದ್ದಾರಿ80ರ ಒಂದು ಭಾಗವು ಕೊಚ್ಚಿಹೋಗಿದೆ.
ಸುಲ್ತಂಗಂಜ್ ಮತ್ತು ರತನ್‌ಪುರ ರೈಲು ನಿಲ್ದಾಣಗಳ ನಡುವಿನ ಸೇತುವೆಯ ಪ್ರವಾಹದ ನೀರಿನಲ್ಲಿ ಮುಳುಗುತ್ತಿದೆ. ಹೀಗಾಗಿ, ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಈಸ್ಟ್ ಸೆಂಟ್ರಲ್ ರೈಲ್ವೇ ತಿಳಿಸಿದೆ.
“ಶನಿವಾರ ರಾತ್ರಿ 11.45ರ ಸುಮಾರಿಗೆ ಪ್ರವಾಹದ ನೀರು ಸೇತುವೆಯ ಗರ್ಡರ್ ಮಟ್ಟಕ್ಕೆ ಏರಿದೆ. ಅಲ್ಲದೆ, ಜಮಾಲ್ಪುರ್-ಭಾಗಲ್ಪುರ್ ವಿಭಾಗದ ಕೆಲವು ಸ್ಥಳಗಳಲ್ಲಿ, ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ” ಎಂದು ರೈಲ್ವೇ ಇಲಾಖೆ ಹೇಳಿದೆ.
ಏತನ್ಮಧ್ಯೆ, ಶನಿವಾರ ಮುಜಾಫರ್‌ಪುರ ಜಂಕ್ಷನ್‌ನ ಬಳಿ ರೈಲು ಎಂಜಿನ್ ಹಳಿತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.