ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಬಿಹಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಬಿಹಾರದ ಭಾಗಲ್ಪುರ ಜಿಲ್ಲೆಯ 35 ವರ್ಷದ ಸಮೀರ್ ರಂಜನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸುಲ್ತಾನಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶಿ ಗ್ರಾಮದಲ್ಲಿ ಗುರುವಾರ ಸಂಜೆ ಆರೋಪಿಯನ್ನು ಬಂಧಿಸಲಾಗಿದೆ. ಪ್ರಧಾನಿ ಗುರುವಾರ ಪಾಟ್ನಾಗೆ ಆಗಮಿಸಿದ್ದು, ಎರಡು ದಿನ ಬಿಹಾರದಲ್ಲಿ ಇರಲಿದ್ದಾರೆ. ಈ ಭೇಟಿ ವೇಳೆ ಪ್ರಧಾನಿಯ ಕೊಲೆ ಮಾಡಲಾಗುವುದು ಎಂದು ಭಾಗಲ್ಪುರದಿಂದ ಬೆದರಿಕೆ ವಾಟ್ಸಾಪ್ ಕರೆ ಬಂದಿತ್ತು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರು ಮೃತ್ಯು; ಉನ್ನತಮಟ್ಟದ ಸಭೆ ಕರೆದ ಪ್ರಧಾನಿ ಮೋದಿ
ಕೊಲೆ ಬೆದರಿಕೆ ಬರುತ್ತಿದ್ದಂತೆ ಭಾಗಲ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ(ಎಸ್‌ಎಸ್‌ಪಿ) ತಕ್ಷಣ ಮಾಹಿತಿ ನೀಡಲಾಗಿದೆ. ಈ ಬಗ್ಗೆ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
71 ವರ್ಷದ ಮಂಟು ಚೌಧರಿ ಅವರ ಮೊಬೈಲ್ ಫೋನ್ ಸಂಖ್ಯೆಯಿಂದ ಕರೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. “ತನಿಖೆ ವೇಳೆ ಆರೋಪಿ ಸಮೀರ್ ರಂಜನ್ ವರ್ಚುವಲ್ ಖಾಸಗಿ ನೆಟ್‌ವರ್ಕ್(VPN) ಬಳಸಿ ಚೌಧರಿ ಅವರ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆರೋಪಿ ಮತ್ತು ಮಂಟು ಚೌಧರಿ ನಡುವೆ ಆಸ್ತಿ ವಿವಾದವಿದ್ದು, ಚೌಧರಿ ಅವರನ್ನು ಸಿಲುಕಿಸಲೆಂದು ರಂಜನ್ ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ. ವಿಚಾರಣೆ ವೇಳೆ ಆರೋಪಿ ಅಪರಾಧ ಒಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
