ದಿವಾಂಗ ತಂದೆಗೆ ಚಿಕಿತ್ಸೆ ಕೊಡಿಸಿ, ತನ್ನೂರಿಗೆ ಹೋಗಲು ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಕಾಮುಕರ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಗೋಪಾಲ್‌ಗಂಜ್‌ನ ಸಸಮುಸಾ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿದೆ. ಪ್ರಕರಣದಲ್ಲಿ ಓರ್ವ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಸಂತ್ರಸ್ತ ಯುವತಿ ತನ್ನ ತಂದೆಗೆ ನೇತ್ರ ಚಿಕಿತ್ಸೆ ಕೊಡಿಸಲು ಗೋಪಾಲ್‌ಗಂಜ್‌ಗೆ ಬಂದಿದ್ದರು. ಚಿಕಿತ್ಸೆಯ ಬಳಿಕ, ಸಂಜೆ ತಮ್ಮ ಊರಿಗೆ ಹಿಂದಿರುಗಲು ಸಸಮುಸಾ ರೈಲ್ವೇ ನಿಲ್ದಾಣಕ್ಕೆ ತೆರಳಿದ್ದರು. ಆದರೆ, ಆ ವೇಳೆಗಾಗಲೇ ರೈಲು ಹೊರಟು ಹೋಗಿತ್ತು. ಹೀಗಾಗಿ, ಇಡೀ ರಾತ್ರಿ ಸಂತ್ರಸ್ತೆ ಮತ್ತು ಆಕೆಯ ತಂದೆ ರೈಲು ನಿಲ್ದಾಣದಲ್ಲೇ ಇರಬೇಕಾಯಿತು ಎಂದು ವರದಿಯಾಗಿದೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯುವತಿ ನೀರು ತರಲೆಂದು ಹೋದಾಗ ಆಕೆಯನ್ನು ಮೂವರು ಕಾಮುಕರು ಎಳೆದೊಯ್ದು ರೈಲು ನಿಲ್ದಾಣದ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ, ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆ ಸಹಾಯಕ್ಕಾಗಿ ಕೂಗಿಕೊಂಡಾಗ, ಸ್ಥಳೀಯರು ಆಕೆಯ ಪರಿಸ್ಥಿತಿಯನ್ನು ಗಮನಿಸಿ, ಕುಚಾಯ್ಕೋಟ್ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಗೋಪಾಲ್‌ಗಂಜ್‌ನ ಎಸ್‌ಪಿ ಅವಧೇಶ್ ದೀಕ್ಷಿತ್ ತಿಳಿಸಿದ್ದಾರೆ.