ಇಂದಿನಿಂದ ಆಗಸ್ಟ್ 12ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದೆ. ನೀಟ್–ಯುಜಿ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ಕನ್ವರ್ ಯಾತ್ರೆಗೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಆದೇಶ ಸೇರಿದಂತೆ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.
ಬಜೆಟ್ ಅಧಿವೇಶನವು ಸುಸೂತ್ರವಾಗಿ ನಡೆಯಲು ಎಲ್ಲ ಪಕ್ಷಗಳು ಸಹಕಾರ ನೀಡಬೇಕು. ಇದು ಸಾಮೂಹಿಕ ಹೊಣೆಗಾರಿಕೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮನವಿ ಮಾಡಿದರು.
ಆದರೆ, ಹಲವು ವಿವಾದಾತ್ಮಕ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ನೀಡಲೇಬೇಕು ಎಂಬುದಾಗಿ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷಗಳ ನಾಯಕರು ಹೇಳುವ ಮೂಲಕ, ಸದನದಲ್ಲಿ ಹೋರಾಟಕ್ಕೆ ತಾವು ಸಜ್ಜಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸರ್ವಪಕ್ಷಗಳ ಸಭೆಯು ಮೂರು ಗಂಟೆ ನಡೆಯಿತು. ಸಭೆಯಲ್ಲಿ ಟಿಎಂಸಿ ಹೊರತುಪಡಿಸಿ 44 ಪಕ್ಷಗಳ 55 ನಾಯಕರು ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ‘ಭಗವಂತ’ನಿಗೇ ಎಚ್ಚರಿಕೆ ಕೊಟ್ಟರೆ ಭಾಗವತ್?
ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ವಿರೋಧ ಪಕ್ಷಗಳಿಗೆ ಬಿಟ್ಟುಕೊಡಬೇಕು. ಇದು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ ಎಂದು ಕಾಂಗ್ರೆಸ್ ಪ್ರತಿಪಾದಿಸಿತು. ‘ಇಂಡಿಯಾ’ ಒಕ್ಕೂಟದ ಮಿತ್ರಪಕ್ಷಗಳು ಈ ಬೇಡಿಕೆಯನ್ನು ಬೆಂಬಲಿಸಿದವು ಎಂದು ಕಾಂಗ್ರೆಸ್ ನಾಯಕ ಕೆ. ಸುರೇಶ್, ಸಭೆ ಬಳಿಕ ತಿಳಿಸಿದರು.
“ಜಮ್ಮು–ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ದಾಳಿ, ಮಣಿಪುರದಲ್ಲಿನ ಪರಿಸ್ಥಿತಿ, ರೈಲು ಅಪಘಾತಗಳು, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸುವ ಅಗತ್ಯವನ್ನು ಸಭೆಯಲ್ಲಿ ವಿವರಿಸಿದ್ದೇವೆ. ‘ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ರಾಜೀನಾಮೆ, ವಿವಿಧ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆಯೂ ಚರ್ಚೆ ನಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟೆವು’ ಎಂದು ಸುರೇಶ್ ಹೇಳಿದರು.
ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕು ಎಂಬುದಾಗಿ ಉತ್ತರ ಪ್ರದೇಶ ಹೊರಡಿಸಿರುವ ಆದೇಶಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿವೆ. ವಿಪಕ್ಷಗಳ ಜೊತೆ ಎನ್‌ಡಿಎ ಅಂಗಪಕ್ಷಗಳು ಸಹ ಈ ಆದೇಶ ಕುರಿತಂತೆ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿವೆ.
ಅಧಿವೆಶನದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್, ಡಿಎಂಕೆ, ಎಎಪಿ ಸೇರಿದಂತೆ ‘ಇಂಡಿಯಾ’ಒಕ್ಕೂಟದ ಮೈತ್ರಿ ಪಕ್ಷಗಳು ಸಜ್ಜಾಗಿವೆ.