ಇತ್ತೀಚೆಗೆ ನಡೆದ ಐದು ರಾಜ್ಯ, ಕೇಂದ್ರಾಡಳಿತ ಪ್ರದೇಶ (ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ) ವಿಧಾನಸಭೆ ಚುನಾವಣೆಗಳ ಸಮಯದಲ್ಲಿ ಬಿಜೆಪಿ ಕೇಂದ್ರ ಕಚೇರಿಯು ಸುಮಾರು ₹1,473 ಕೋಟಿ ರೂಪಾಯಿ (₹1,472.8 ಕೋಟಿ) ಆದಾಯ ಗಳಿಸಿದೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ (EC) ಸಲ್ಲಿಸಲಾದ ವೆಚ್ಚದ ವಿವರಗಳಿಂದ ತಿಳಿದುಬಂದಿದೆ. ಇದು ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಪಡೆದ ಆದಾಯಕ್ಕಿಂತ (₹207.17 ಕೋಟಿ) ಏಳು ಪಟ್ಟು ಹೆಚ್ಚಾಗಿದೆ.
ಚುನಾವಣಾ ಅವಧಿಯಲ್ಲಿ ಬಿಜೆಪಿಯ ಕೇಂದ್ರ ಕಚೇರಿಯ ಆದಾಯದಲ್ಲಿ ಭಾರಿ ಏರಿಕೆಯಾಗಿದೆ. ಆ ಬಳಿಕ ಪಕ್ಷದ ಆದಾಯ ₹6,722.6 ಕೋಟಿಯಿಂದ ₹7,627.2 ಕೋಟಿಗೆ ಏರಿಕೆಯಾಗಿದ್ದು, ₹904.6 ಕೋಟಿಯಷ್ಟು ನಿವ್ವಳ ಹೆಚ್ಚಳವಾಗಿದೆ. ಬಿಜೆಪಿಯು ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಚುನಾವಣಾ ವೆಚ್ಚದ ಸಂಪೂರ್ಣ ವಿವರಗಳನ್ನು ಆಯೋಗಕ್ಕೆ ಇನ್ನೂ ಸಲ್ಲಿಕೆ ಮಾಡಬೇಕಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಕಾಂಗ್ರೆಸ್‌ನ ಮೂವರು, ಬಿಜೆಪಿ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆ
ಮತ್ತೊಂದೆಡೆ, ಕಾಂಗ್ರೆಸ್ ತನ್ನ ಕೇಂದ್ರ ಮತ್ತು ಎಲ್ಲಾ ಐದು ರಾಜ್ಯಗಳ ಘಟಕಗಳು ಸೇರಿ ಒಟ್ಟು ₹207.17 ಕೋಟಿ ಆದಾಯ ಮತ್ತು ₹248.55 ಕೋಟಿ ವೆಚ್ಚವನ್ನು ವರದಿ ಮಾಡಿದೆ. ಚುನಾವಣಾ ಅವಧಿಯಲ್ಲಿ ಕಾಂಗ್ರೆಸ್ ಖಾತೆಯಲ್ಲಿದ್ದ ಹಣ ₹169.06 ಕೋಟಿಯಿಂದ ₹103.2 ಕೋಟಿಗೆ ಇಳಿಕೆಯಾಗಿದ್ದು, ಒಟ್ಟಾರೆ ₹65.86 ಕೋಟಿ ಕೊರತೆ ಅನುಭವಿಸಿದೆ.
ಲಭ್ಯವಿರುವ ಆಯೋಗದ ಮಾಹಿತಿಯಂತೆ, ಬಿಜೆಪಿ ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ₹159.7 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಅತ್ಯಧಿಕವಾಗಿ ಅಸ್ಸಾಂನಲ್ಲಿ ₹96.27 ಕೋಟಿ ವೆಚ್ಚವಾಗಿದೆ (ಇದರಲ್ಲಿ ₹37 ಕೋಟಿ ಜಾಹೀರಾತು ಮತ್ತು ₹27.3 ಕೋಟಿ ತಾರಾ ಪ್ರಚಾರಕರ ಪ್ರಯಾಣಕ್ಕೆ ವೆಚ್ಚವಾಗಿದೆ).
ಕಾಂಗ್ರೆಸ್ ಐದೂ ರಾಜ್ಯಗಳಲ್ಲಿ ಒಟ್ಟಾರೆಯಾಗಿ ₹143 ಕೋಟಿಯನ್ನು ಸಾಮಾನ್ಯ ಪಕ್ಷದ ಪ್ರಚಾರಕ್ಕೆ ಮತ್ತು ₹105.55 ಕೋಟಿಯನ್ನು ಅಭ್ಯರ್ಥಿಗಳಿಗಾಗಿ ವೆಚ್ಚ ಮಾಡಿದೆ. ಕೇರಳದಲ್ಲಿ ಕಾಂಗ್ರೆಸ್ ಅತ್ಯಧಿಕ ಅಂದರೆ ₹59.28 ಕೋಟಿ ಪ್ರಚಾರ ವೆಚ್ಚ ಮಾಡಿದೆ.





