ಸಿಎಂಆರ್‌ಎಲ್ ಪ್ರಕರಣದಲ್ಲಿ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹೊರಿಸಿರುವ ₹3.28 ಕೋಟಿ ಲಂಚದ ಆರೋಪಗಳನ್ನು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಈ ಬೆಳವಣಿಗೆಯನ್ನು “ಲಜ್ಜಾಗೇಡಿ ನಿರೂಪಣೆ” ಎಂದು ಕರೆದಿರುವ ಅವರು, ಇಂತಹ ಸುಳ್ಳು ಆರೋಪಗಳಿಂದ ತಮ್ಮ ರಾಜಕೀಯ ಜೀವನ ಅಥವಾ ವ್ಯಕ್ತಿತ್ವಕ್ಕೆ ಕುಂದು ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಹಾಗೂ ಅಳಿಯ ಪಿ.ಎ. ಮೊಹಮ್ಮದ್ ರಿಯಾಸ್ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಡಿ ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನೀಡಿದ ವರದಿ/ಪತ್ರದ ಕುರಿತು ಕೇರಳ ಸರ್ಕಾರ ಕಾನೂನು ಅಭಿಪ್ರಾಯ ಪಡೆಯಲು ತೀರ್ಮಾನಿಸಿದೆ.
ಇದನ್ನೂ ಓದಿ: ಪಿಣರಾಯಿ ವಿಜಯನ್ ಮಗಳಿಗೆ ಇಡಿ ಸಂಕಷ್ಟ: ವೀಣಾ ಕೈಬರಹದ ಟಿಪ್ಪಣಿ ವಶಕ್ಕೆ
ಸಿಎಂಆರ್‌ಎಲ್ (Cochin Minerals and Rutile Ltd) ಕಂಪನಿಯಿಂದ ವೀಣಾ ಅವರ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಸಂಸ್ಥೆಗೆ ನೀಡಲಾದ ಹಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ ಇಡಿ, ಪಿಣರಾಯಿ ವಿಜಯನ್ ಅವರು ತಮ್ಮ ಮಗಳ ಮೂಲಕ ₹3.28 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದೆ. ಈ ಹಣವನ್ನು ವಿದೇಶಕ್ಕೆ ರವಾನಿಸಲಾಗಿದೆ ಎಂದು ಇಡಿ ತನ್ನ ವರದಿಯಲ್ಲಿ ಉಲ್ಲೇಖಿಸಿ, ಅಕ್ರಮ ಹಣ ತಡೆ ಕಾಯ್ದೆ (ಪಿಎಂಎಲ್‌ಎ) ಸೆಕ್ಷನ್ 66(2) ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿದೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, “ಕೇಂದ್ರೀಯ ಸಂಸ್ಥೆಯೊಂದು ಈ ಮಟ್ಟದ ಸುಳ್ಳು ಕಥೆಗಳನ್ನು ಹೆಣೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಜನರಿಗೆ ನನ್ನ ಬಗ್ಗೆ ಗೊತ್ತಿದೆ. ಇಂತಹ ಪ್ರಚಾರಗಳಿಂದ ನನ್ನನ್ನು ಭ್ರಷ್ಟ ಎಂದು ಬಿಂಬಿಸಲು ಸಾಧ್ಯವಿಲ್ಲ. ಇದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸುತ್ತೇವೆ” ಎಂದು ಹೇಳಿದ್ದಾರೆ. ಸಿಪಿಐಎಂ ಪಕ್ಷವೂ ಈ ನಡೆಯನ್ನು “ಕೇಂದ್ರ ಸರ್ಕಾರದ ರಾಜಕೀಯ ಸೇಡಿನ ಕ್ರಮ” ಎಂದು ಖಂಡಿಸಿದೆ.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಇಡಿ ಕಳುಹಿಸಿರುವ ಪತ್ರದಲ್ಲಿ ಗಂಭೀರ ಆರೋಪಗಳಿವೆ. ಕೇಂದ್ರೀಯ ತನಿಖಾ ಸಂಸ್ಥೆಯಿಂದ ಪತ್ರ ಬಂದಿರುವುದರಿಂದ ಅದನ್ನು ಕಾನೂನಾತ್ಮಕವಾಗಿ ಪರಿಶೀಲನೆಗೆ ಒಳಪಡಿಸಲಾಗುವುದು. ಕಾನೂನು ತನ್ನದೇ ಆದ ಹಾದಿಯಲ್ಲಿ ಸಾಗಲಿದೆ” ಎಂದು ತಿಳಿಸಿದ್ದಾರೆ.





