ಬಿಹಾರದಲ್ಲಿ ಎದುರಾಳಿಗಳ ಕೈಕಾಲು ಕಟ್ಟಿ, ತಾನು ಗೆಲ್ಲುವುದು ಬಿಜೆಪಿ ಹುನ್ನಾರ

Date:

Advertisements
ಬಿಹಾರ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳು ಗಣನೀಯ ಸಂಖ್ಯೆಯ ಸಂಸದರನ್ನು ಲೋಕಸಭೆಗೆ ಆರಿಸಿ ಕಳಿಸುತ್ತವೆ. ಈ ರಾಜ್ಯಗಳ ಅಧಿಕಾರ ಹಿಡಿಯುವುದು ಲೋಕಸಭಾ ಚುನಾವಣೆಗಳಲ್ಲಿ ‘ಸ್ವಾಭಾವಿಕ ಮೇಲುಗೈ’ ಕಲ್ಪಿಸಿಕೊಡುತ್ತದೆ. ಗೆಲುವಿಗಾಗಿ ಯಾವ ನೈತಿಕ ಪಾತಾಳಕ್ಕೆ ಬೇಕಾದರೂ ಕುಸಿಯಲು ಸಿದ್ಧ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾರಿ ಹೇಳಿದೆ.

ಬಿಹಾರ ವಿಧಾನಸಭಾ ಚುನಾವಣೆಗಳು ಬಾಗಿಲು ಬಡಿದಿರುವ ಹಂತದಲ್ಲಿ 65.64 ಲಕ್ಷದಷ್ಟು ಭಾರೀ ಸಂಖ್ಯೆಯ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಚುನಾವಣಾ ಆಯೋಗದ ಕಾರ್ಯವೈಖರಿ ತೀವ್ರ ವಿವಾದಕ್ಕೆ ಗುರಿಯಾಗಿದೆ. ಸೋಲಿನ ಶಂಕೆಯಿಂದಾಗಿ ಬಿಜೆಪಿಯು ಆಯೋಗದ ಮೂಲಕ ಈ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ನಡೆಸುತ್ತಿದೆ ಎಂಬ ಗಂಭೀರ ಆರೋಪ ಎದುರಿಸಿದೆ. ಎದುರಾಳಿಯ ಕೈಕಾಲು ಕಟ್ಟಿ, ಸ್ಪರ್ಧಿಸಿ ತಾನು ಗೆಲ್ಲುವ ತಂತ್ರದ ಭಾಗವಿದು.

ಬಿಹಾರದ ಜನರ ವಲಸೆ ಸಂಸ್ಕೃತಿ, ಅನಕ್ಷರತೆ ಮತ್ತು ಆರ್ಥಿಕ ದುಸ್ಥಿತಿಯನ್ನು ಗಮನಿಸಿದರೆ, ಇಂತಹ ದೊಡ್ಡ ಸಂಖ್ಯೆಯ ಮತದಾರರನ್ನು ತೆಗೆದುಹಾಕುವುದು ಜನರ ಮತದಾನದ ಹಕ್ಕಿನ ಮೇಲಿನ ನಡೆದಿರುವ ಭಾರೀ ದಾಳಿಯೇ ಸರಿ.

ಮುಸಲ್ಮಾನ ಜನಸಂಖ್ಯೆ ದಟ್ಟವಾಗಿರುವ ಮತ್ತು ಬೇರೆ ರಾಜ್ಯಕ್ಕೆ ಹೆಚ್ಚು ಬಿಹಾರಿಗರು ವಲಸೆ ಹೋಗಿರುವ ಜಿಲ್ಲೆಗಳಲ್ಲೇ ಈ ಪರಿಷ್ಕರಣೆ ನಡೆಯುತ್ತಿರುವುದಾಗಿ ‘ದಿ ಹಿಂದೂ’ ಪತ್ರಿಕೆಯ ವಿಶ್ಲೇಷಣೆ ಪುರಾವೆ ಸಹಿತ ವಿಶ್ಲೇಷಿಸಿರುವುದು ಗಮನಾರ್ಹ.

Advertisements

ಈ ನಡುವೆ ಈ ರಾಜ್ಯದ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಎರಡು ಮತದಾರರ ಗುರುತಿನ ಚೀಟಿಗಳನ್ನು (EPIC) ಹೊಂದಿರುವ ಚುನಾವಣಾ ಆಯೋಗದ ಪ್ರತ್ಯಾರೋಪವು ವಿವಾದದ ನೀರನ್ನು ಮತ್ತಷ್ಟು ಬಗ್ಗಡಗೊಳಿಸಿದೆ.

ರಾಷ್ಟ್ರೀಯ ಜನತಾದಳದ ನಾಯಕರೂ ಆಗಿರುವ ತೇಜಸ್ವಿ ಯಾದವ್‌ ಇದೇ ಆಗಸ್ಟ್ 2ರಂದು ಬಿಹಾರದ ಕರಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕಾಣೆಯಾಗಿದೆಯೆಂದು ಆರೋಪಿಸಿದ್ದರು. ಆದರೆ, ಚುನಾವಣಾ ಆಯೋಗವು ಈ  ಆರೋಪವನ್ನು ʼನಿರಾಧಾರ ಮತ್ತು ಕಾನೂನುಬಾಹಿರʼ ಎಂದು ಖಂಡಿಸಿತು. ಅವರ ಹೆಸರು ಕರಡು ಪಟ್ಟಿಯಲ್ಲಿದ್ದು, ಅದರ ಕ್ರಮಸಂಖ್ಯೆ 416 ಎಂಬುದನ್ನೂ ಸ್ಪಷ್ಟಪಡಿಸಿತು

ತೇಜಸ್ವಿ ಆರೋಪವನ್ನು ಬಿಜೆಪಿಯು ಅವರಿಗೇ ತಿರುಗುಬಾಣವಾಗಿ ಪ್ರಯೋಗಿಸಿದೆ. ಎರಡು ಗುರುತು ಪತ್ರಗಳನ್ನು ಹೊಂದಿರುವ ಆರೋಪದ ಅಲೆಗಳಲ್ಲಿ, 65 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ದೈತ್ಯ ದುರುಳ ಕೃತ್ಯವನ್ನು ಮರೆಮಾಚಲು ಪ್ರಯತ್ನಿಸಿದೆ. ಅಂಗೈ ಅಗಲದ ಚಿಂದಿಯಲ್ಲಿ ಮಾನ ಮುಚ್ಚಿಕೊಳ್ಳುವ ಬಿಜೆಪಿಯ ಈ ಪ್ರಯತ್ನ ಫಲಿಸುವುದಿಲ್ಲ.

ಮೇಲ್ನೋಟಕ್ಕೆ ಈ ಆರೋಪವು ತೇಜಸ್ವಿಯವರ ರಾಜಕೀಯ ವಿಶ್ವಾಸಾರ್ಹತೆಯನ್ನು ಕೊಂಚಮಟ್ಟಿಗೆ ಕುಂದಿಸಿರುವುದು ಹೌದು. ಎರಡು ಗುರುತಿನ ಚೀಟಿಗಳನ್ನು ಹೊಂದಿರುವ ತಪ್ಪಿನಿಂದ ಅವರು ಮುಜುಗರ ಎದುರಿಸಿರುವುದೂ ನಿಜ. ಆದರೆ ಬೆಟ್ಟದಷ್ಟು ಪಾತಕಗಳು ನಿತ್ಯಬದುಕಿನ ಭಾಗವೇ ಆಗಿ ಹೋಗಿರುವ ಬಿಹಾರದಲ್ಲಿ ಈ ಆರೋಪಕ್ಕೆ ಗಾಳಿ ಹೊಡೆದು ನಿಲ್ಲಿಸುವುದು ಸರಳವೇನೂ ಅಲ್ಲ. ತೇಜಸ್ವಿ ಮೇಲಿನ ಆರೋಪ ಕುರಿತು ತನಿಖೆ ನಡೆಸಬೇಕು. ಅದು ನಿಷ್ಪಕ್ಷಪಾತಿಯೂ ಮತ್ತು ಪಾರದರ್ಶಕವೂ ಆಗಿರಬೇಕು..

ತೇಜಸ್ವಿ ಯಾದವ್‌, ಒಬ್ಬ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿಯಾಗಿ, ರಾಜಕೀಯ ಜವಾಬ್ದಾರಿಯನ್ನು ತೋರಿಸಬೇಕಿತ್ತು. ಆದರೆ, ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿದೆ ಎಂದು ಆರೋಪಿಸಿ,.ಯಡವಟ್ಟನ್ನು ಆಹ್ವಾನಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷ (BJP)ದಂತಹ ಸುಸಂಘಟಿತ ಮತ್ತು  ಹೇರಳ ಹಣಕಾಸಿನ ಸಂಪನ್ಮೂಲಭರಿತ ಪಕ್ಷವನ್ನು ಎದುರಿಸುವುದು ಪ್ರತಿಪಕ್ಷಗಳಿಗೆ ಬಹುದೊಡ್ಡ ಸವಾಲೇ ಸರಿ. ಇಷ್ಟು ಮಾತ್ರವಲ್ಲದೆ ಹಲವು ಸಾಂವಿಧಾನಿಕ ಸಂಸ್ಥೆಗಳ ರೆಕ್ಕೆಪುಕ್ಕ ತರಿದು ತನ್ನ ‘ಬೆಂಗಾವಲಿಗೆ ನೇಮಿಸಿಕೊಂಡಿದೆ’ ಕೇಸರಿ ಪಕ್ಷ.

ಎರಡು ಮತಪತ್ರದ ಮುಜುಗರವು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟವನ್ನು ತತ್ಕಾಲಕ್ಕಾದರೂ ಮುಖಭಂಗಕ್ಕೆ ಗುರಿಪಡಿಸಿದೆ. 66.64 ಲಕ್ಷ ಮತದಾರರನ್ನು ಕೈಬಿಟ್ಟಿರುವ ಅನ್ಯಾಯದ ವಿರುದ್ಧ ತೇಜಸ್ವಿ- ರಾಹುಲ್ ಗಾಂಧಿ ನೇತೃತ್ವದ “ವೋಟ್ ಅಧಿಕಾರ ಯಾತ್ರೆ”ಯನ್ನು ಇದೇ 10ರಂದು ಆರಂಭಿಸಬೇಕಿತ್ತು. ಸಾಸಾರಾಮ್‌ನಿಂದ ಆರಂಭಿಸಿ, ಆಗಸ್ಟ್ 19ರಂದು ಅರಾಡಿಯಾದಲ್ಲಿ ಕೊನೆಗೊಳಿಸಲು ಯೋಜಿಸಲಾಗಿತ್ತು. ಆದರೆ, ತೇಜಸ್ವಿ ಎಡವಟ್ಟಿನಿಂದ ಈ ಯಾತ್ರೆಯನ್ನು ಮುಂದೂಡಲಾಗಿದೆ. ಜೆಎಂಎಂ ನಾಯಕ ಶಿಬು ಸೋರೆನ್‌ರ ನಿಧನದಿಂದ ರ್‍ಯಾಲಿಯನ್ನು ಮುಂದೂಡಲಾಗಿದೆ ಎಂಬ ಕಾರಣ ನೀಡಿದ್ದರೂ, ತೇಜಸ್ವಿ ಮೂರ್ಖತನದಿಂದ ಉಂಟಾದ ಮುಜುಗರವೇ ಈ ನಿರ್ಧಾರಕ್ಕೆ ಮುಖ್ಯ ಕಾರಣವೆಂದು ಕಂಡುಬರುತ್ತದೆ.

65 ಲಕ್ಷ ಮತದಾರರನ್ನು ತೆಗೆದುಹಾಕಿರುವುದು ಕಾನೂನುಬಾಹಿರ ಮತ್ತು ಜನರ ಹಕ್ಕಿನ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಟೀಕಿಸಿದ್ದಾರೆ. ತಮಿಳುನಾಡಿನಲ್ಲಿ 6.5 ಲಕ್ಷದಷ್ಟು ವಲಸೆ ಕಾರ್ಮಿಕರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.

“ತೇಜಸ್ವಿ ವಿರುದ್ದದ ಆರೋಪ ಗಂಭೀರ ಅನ್ನಿಸಿದರೂ 65.64 ಲಕ್ಷ ಮಂದಿ ಮತದಾರರನ್ನು ಕೈ ಬಿಟ್ಟಿರುವ ಕೃತ್ಯದ ಮುಂದೆ  ಸಣ್ಣ ವಿಷಯ ಎನಿಸುತ್ತದೆ. ತಮ್ಮ ಈ ಗಂಭೀರ ಕೃತ್ಯದ ಮೇಲೆ ಪರದೆ ಎಳೆಯಲು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಹುನ್ನಾರ ನಡೆಸುತ್ತಿವೆ. ವಿಧಾನಸಭಾ ಚುನಾವಣೆಗಳಲ್ಲಿ ಕೇವಲ ಕೆಲವೇ ಸಾವಿರ ಮತಗಳಿಂದ ಸೋಲು ಗೆಲುವು ತೀರ್ಮಾನವಾಗುವ ಹತ್ತಾರು ಕ್ಷೇತ್ರಗಳಿರುತ್ತವೆ. ಹತ್ತು ಲಕ್ಷ ವೋಟುಗಳು ಹೆಚ್ಚುಕಡಿಮೆಯಾದರೂ 20-30 ವಿಧಾನಸಭಾ ಕ್ಷೇತ್ರಗಳ ಸೋಲುಗಳನ್ನು ಗೆಲುವಾಗಿಸಬಹುದು ಮತ್ತು ಗೆಲುವುಗಳನ್ನು ಸೋಲಾಗಿಸಬಹುದು. ಹೀಗಿರುವಾಗ 65.64 ಲಕ್ಷ ಎಂಬುದು ಅಗಾಧ ಸಂಖ್ಯೆ.  ಪ್ರತಿಪಕ್ಷಗಳನ್ನು ಚುನಾವಣೆಗೆ ಮೊದಲೇ ಸೋಲಿಸುವ ಬಹುದೊಡ್ಡ ಬಿಜೆಪಿ ಹುನ್ನಾರವಿದು. ರಣರಂಗಕ್ಕೆ ಇಳಿಯುವ ಮುನ್ನವೇ ಗೆಲುವನ್ನು ಕೈವಶ ಮಾಡಿಕೊಳ್ಳುವ ಹವಣಿಕೆ… ತೇಜಸ್ವಿ ಯಾದವ್‌ ಅವರ ಗುರುತಿನ ಚೀಟಿಗಳು ಹೇಗೆ ಎರಡೆರಡು ಬಂದವು ಎಂಬುದನ್ನು ತನಿಖೆಗೆ ಒಳಪಡಿಸಲಿ, ಕಾನೂನು ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಬಹುದು, ಅದನ್ನು ಮಾಡಲಿ. ಆದರೆ ಈಗ ಬಿಹಾರದಲ್ಲಿಯೇ ದಿಢೀರ್‌ ಮತದಾರರ ಪರಿಷ್ಕರಣೆ ಯಾಕೆ ಶುರುವಾಗಿದೆ. ಇಂತಹ ಚಟುವಟುಕೆಗಳನ್ನೆಲ್ಲ ಚುನಾವಣೆಗೆ ವರ್ಷಗಳಷ್ಟು ಮುನ್ನವೇ ಪೂರ್ಣಗೊಳಿಸಿರಬೇಕು. ಇಷ್ಟು ತಡವಾಗಿ ತರಾತುರಿಯಲ್ಲಿ ಮತದಾರರ ಪರಿಷ್ಕರಣೆ ಕೈಗೊಂಡಿರುವುದರ ಹಿಂದಿನ ಹುನ್ನಾರವನ್ನು ಅರಿಯಬೇಕಿದೆ” ಎಂಬುದು ಹಿರಿಯ ಪತ್ರಕರ್ತ ಡಿ ಉಮಾಪತಿಯವರ ಅಭಿಪ್ರಾಯವಾಗಿದೆ.

“ತಮಿಳುನಾಡಿನಲ್ಲಿ ಕೂಡ ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿವೆ. ಬಿಹಾರದಲ್ಲಿನ ಬಹುದೊಡ್ಡ ಸಂಖ್ಯೆಯ ಮತದಾರರನ್ನು ಕೈಬಿಟ್ಟಿರುವುದು ಮತ್ತು ತಮಿಳುನಾಡಿನಲ್ಲಿ ಮತದಾರರ ಸೇರ್ಪಡೆಯಾಗಿರುವುದು ಈ ಎರಡೂ ಕೂಡ ಆಯಾ ರಾಜ್ಯಗಳ ರಾಜಕೀಯ ಚಿತ್ರಣವನ್ನೇ ಬದಲಾಯಿಸುತ್ತವೆ. ಮುಂಬರುವ ದಿನಗಳಲ್ಲಿ ಕೈಗೊಳ್ಳಲಾಗುವ ಕ್ಷೇತ್ರ ಮರುವಿಂಗಡಣೆಯು ದಕ್ಷಿಣ ಭಾರತದ ಸೀಟುಗಳನ್ನು ಕುಗ್ಗಿಸಿ, ಉತ್ತರದ ರಾಜ್ಯಗಳ ಸೀಟುಗಳನ್ನು ಹಿಗ್ಗಿಸಲಿದೆ. ಕೇಂದ್ರ ಸರ್ಕಾರದ ರಚನೆಯಲ್ಲಿ ದಕ್ಷಿಣದ ರಾಜ್ಯಗಳ ಸಂಸದರ ಸಂಖ್ಯಾಬಲ ಅಪ್ರಸ್ತುತ ಎಂಬ ಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಜನತಂತ್ರ ದೊಡ್ಡ ಅನಾಹುತಕ್ಕೆ ಸಿಕ್ಕಿಹಾಕಿಕೊಳ್ಳಲಿದೆ.  ಪಕ್ಷಪಾತದಿಂದ ಮೇಲೆದ್ದು ಕೆಲಸ ಮಾಡಬೇಕಾದ ಚನಾವಣಾ ಆಯೋಗ ಆಳುವವರ ಅಡಿಯಾಳಾಗಿ ವರ್ತಿಸುತ್ತಿರುವುದು ಅಂಗೈ ಹುಣ್ಣು. ಇದಕ್ಕೆ ಕನ್ನಡಿ ಬೇಕಿಲ್ಲ” ಎನ್ನುತ್ತಾರೆ.

ಸಾಮಾಜಿಕ ಕಾರ್ಯಕರ್ತ ಡಾ. ಎಚ್ ವಿ ವಾಸು ಮಾತನಾಡಿ, “ಬಿಹಾರದ ಜನ ಡುಡಿಯುವುದಕ್ಕಾಗಿ ಇಡೀ ದೇಶಾದ್ಯಂತ ವಲಸೆ ಹೋಗುತ್ತಾರೆ. ಆ ರಾಜ್ಯದಲ್ಲಿ ತೀವ್ರ ನಿರಕ್ಷರತೆ ಇದೆ. ಹೀಗೆಲ್ಲಾ ಇರುವಾಗ ಅಲ್ಲಿಯ ಜನರು ದೇಶಾದ್ಯಂತ ಹಲವು ಕಡೆ ಕಾರ್ಮಿಕರಾಗಿದ್ದುಕೊಂಡು ತಾತ್ಕಾಲಿಕ ನೆಲೆ ಕಂಡುಕೊಂಡಿರಬಹುದು. ಹಾಗಂದ ಮಾತ್ರಕ್ಕೆ ಅವರು ಬಿಹಾರದ  ಮತದಾರರೇ ಅಲ್ಲವೆಂಬುದು ಸರಿಯಾದ ನಡೆಯಲ್ಲ. ಹಾಗೆಯೇ 65.64 ಲಕ್ಷ ಮಂದಿ ಮತದಾರರನ್ನು ಕೈ ಬಿಡುವುದು ಬಹುದೊಡ್ಡ ಅನ್ಯಾಯ. ದೇಶದ ಯಾವುದೇ ಪ್ರಜೆಯೂ ಮತದಾನದಿಂದ ವಂಚಿತವಾಗಬಾರದು. ಇನ್ನು ಇವರು ನೇಪಾಳ ಮತ್ತು ಬಾಂಗ್ಲಾ ದೇಶದಿಂದ ವಲಸೆ ಬಂದವರು ಎಂದೆಲ್ಲ ಮಾತನಾಡಕೂಡದು. ಹಾಗೆ ಆಗಿದ್ದಲ್ಲಿ ಅದರ ಹೊಣೆಯನ್ನು ತಾನೇ ಹೊರಬೇಕು ಎಂಬುದನ್ನು ಕೇಂದ್ರ ಸರ್ಕಾರ ಅರಿಯಲಿ ಎಂದರು.

“ಇಷ್ಟು ವರ್ಷ ಇಲ್ಲದೇ ಇದ್ದಿದ್ದು ಈ ತಕ್ಷಣದಲ್ಲಿ ಬಿಹಾರದಲ್ಲೇ ಈ ರೀತಿಯ ಮತದಾರರ ಪರಿಷ್ಕರಣೆ ಮಾಡಬೇಕು ಎನ್ನುವಂತಹ ತುರ್ತು ಏನೂ ಇಲ್ಲ. ಇಷ್ಟು ಜನ ಮತದಾರರು ಅವರೇನಾ ಹೌದಾ ಇಲ್ಲವಾ ಅಂತ ಚೆಕ್‌ ಮಾಡುವುದಕ್ಕೆ ಮತಗಟ್ಟೆ ಸೇರಿದಂತೆ ಬೇರೆ ಬೇರೆ ರೀತಿಯ ಪ್ರಕ್ರಿಯೆಗಳಿವೆ. ಪ್ರತಿ ಮತಗಟ್ಟೆನಲ್ಲಿ ಎಲ್ಲ ಪಕ್ಷದ ಬೂತ್‌ ಏಜೆಂಟ್‌ಗಳು ಕೂತಿರುತ್ತಾರೆ. ಆ ಬೂತ್‌ ಏಜೆಂಟ್‌ಗಳು ಇಂತಹ ಮನೆಯವರು ಎಲ್ಲಿದ್ದಾರೆ, ಏನು ಎತ್ತ ಎಂಬುದನ್ನೆಲ್ಲ ಪರಿಶೀಲಿಸುತ್ತಾರೆ. ಇದರಿಂದ ಅನಧಿಕೃತ ಮತದಾರರನ್ನು ಮತಗಟ್ಟೆಗಳಲ್ಲಿಯೇ ಗುರುತಿಸಬಹುದು. ಎಸ್‌ಐಆರ್‌ ಕೈಬಿಟ್ಟುರುವಂತಹ ಮತದಾರರನ್ನು ಮುಚ್ಚಿಹಾಕದಂತೆ ಚುನಾವಣಾ ಆಯೋಗ ಗಮನಹರಿಸಬೇಕು. ಹಿಂದೆದೂ ಕಂಡಿಲ್ಲದ ಇಂತಹ ನಡೆ ಈ ದೇಶದ ಚುನಾವಣಾ ಪ್ರಕ್ರಿಯೆಗೆ ಹಾಗೂ ಜನರ ವೋಟಿನ ಹಕ್ಕು ಕಸಿದಿದೆ. ಈ ವಿಚಾರವನ್ನು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಚಟುವಟಿಕೆಯನ್ನು ಇಷ್ಟಕ್ಕೆ ನಿಲ್ಲಿಸಿ ಮುಂದಿನ ದಿನಗಳಲ್ಲಿ ಪರಿಷ್ಕರಣೆ ಮಾಡಿಕೊಳ್ಳಬಹುದು” ಎಂಬ ಅಭಿಪ್ರಾಯವನ್ನು ಡಾ.ವಾಸು ವ್ಯಕ್ತಪಡಿಸಿದರು.

ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಆರೋಪಗಳು ಹೊಸತೇನಲ್ಲ. 2016ರಲ್ಲಿ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್‌ ಆಯೋಗದ ಪಕ್ಷಪಾತದ ಕಾರ್ಯನಿರ್ವಹಣೆಯನ್ನು ಟೀಕಿಸಿದ್ದರು. ಇದೀಗ,  ಆಯೋಗವನ್ನು ಸಂಸದೀಯ ಮೇಲ್ವಿಚಾರಣೆಗೆ ಒಳಪಡಿಸಬೇಕು ಎಂದು ಗೌರವ್ ಗೋಗೋಯ್ ಆಗ್ರಹಿಸಿದ್ದಾರೆ.

ಆಯೋಗವು 65 ಲಕ್ಷ ಹೆಸರುಗಳನ್ನು ಕೈಬಿಟ್ಟಿರುವ ಕ್ರಮ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕೆಂಬ ಪ್ರತಿಪಕ್ಷಗಳ ಆಗ್ರಹಕ್ಕೆ ಮೋದಿ ಸರ್ಕಾರ ಸೊಪ್ಪು ಹಾಕುತ್ತಿಲ್ಲ. ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ಅವರು, 1988ರಲ್ಲಿ ಅಂದಿನ ಸ್ಪೀಕರ್  ಬಲರಾಮ್ ಜಾಖಡ್ ತೀರ್ಪನ್ನು ಉಲ್ಲೇಖಿಸಿ, ಆಯೋಗದ ಕೆಲಸಕಾರ್ಯಗಳ ಬಗ್ಗೆ ಚರ್ಚೆಗೆ ಅವಕಾಶವಿಲ್ಲ ಎಂದು ಪ್ರತಿಪಕ್ಷಗಳ 34 ಮಂದಿ ಸಂಸದರ ನೋಟಿಸ್‌ಗಳನ್ನು ತಿರಸ್ಕರಿಸಿದ್ದಾರೆ.

ಮತದಾರರನ್ನು ಕೈಬಿಟ್ಟಿರುವ ಕುರಿತು ‘ದಿ ಹಿಂದು’ ಪತ್ರಿಕೆಯು ಡೇಟಾ ವರದಿಯು, ಜಿಲ್ಲಾವಾರು ವಿಶ್ಲೇಷಣೆಯಲ್ಲಿ ಕಳವಳಕಾರಿ ಅಂಶಗಳನ್ನು ಬಯಲು ಮಾಡಿದೆ. ಮುಸಲ್ಮಾನರು ಬಹುತೇಕ ಬಿಜೆಪಿಯ ಮತದಾರರಲ್ಲ. ಆದರೆ ಮುಸ್ಲಿಂ ಜನಸಂಖ್ಯೆಯು ಹೆಚ್ಚಾಗಿರುವ ಜಿಲ್ಲೆಗಳಲ್ಲೇ ಮತದಾರರನ್ನು ಕೈಬಿಟ್ಟಿರುವ ಪ್ರಮಾಣ ಹೆಚ್ಚಾಗಿದೆ. ಇದು ಒಂದು ರೀತಿಯ ಜನಾಂಗೀಯ ತಾರತಮ್ಯದ ಶಂಕೆಯತ್ತ ಬೊಟ್ಟು ಮಾಡಿದೆ. ಆದರೆ ಇದನ್ನು ದೃಢೀಕರಿಸಲು ಹೆಚ್ಚಿನ ಸೂಕ್ಷ್ಮ ವಿಶ್ಲೇಷಣೆ ಅಗತ್ಯವಿದೆ. ಇದಕ್ಕೆ ವಿರುದ್ಧವಾಗಿ, ಪರಿಶಿಷ್ಟ ಜಾತಿಗಳ(SC) ಜನಸಂಖ್ಯೆಯ ಜಿಲ್ಲೆಗಳಲ್ಲಿ ಕಡಿಮೆ ಮತದಾರರನ್ನು ತೆಗೆದುಹಾಕಲಾಗಿದೆ, ಆದರೂ ಇದು ವಿಭಿನ್ನ ಸಾಮಾಜಿಕ ಗುಂಪುಗಳಿಗೆ ಹೋಲಿಸಿದರೆ ಮತ್ತು ಮುಸ್ಲಿಂ ಮತದಾರರಪಟ್ಟಿಯನ್ನು ಗಮನಿಸಿದಾಗ ಈ ಪ್ರಕರಣಕ್ಕೂ ಅನ್ವಯಿಸುತ್ತದೆ. ಜತೆಗೆ, ಬಿಹಾರದಲ್ಲಿ ಮಹಿಳೆಯರಿಗಿಂತ ಪುರುಷ ಮತದಾರರು ನೋದಾಯಿಸಿಕೊಂಡಿದ್ದರೂ ಕೂಡಾ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಇದು ಬಿಹಾರದ ಅತಿದೊಡ್ಡ ವಲಸೆ ಸಂಸ್ಕೃತಿಯಿಂದಾಗಿ, ಪುರುಷ ಮತದಾರರು ಮತದಾನ ಚಲಾಯಿಸಲು ಸಾಧ್ಯವಾಗದಿರುವುದನ್ನು ತೋರಿಸುತ್ತದೆ.

ಇದನ್ನೂ ಓದಿದ್ದೀರಾ? ಮಾಲೆಗಾಂವ್ ಸ್ಫೋಟ | ಪ್ರಮುಖ ಸಾಕ್ಷಿಗಳನ್ನೇ ಕೈಬಿಟ್ಟಿದ್ದ ಪ್ರಾಸಿಕ್ಯೂಷನ್; ಅನುಮಾನಗಳಿದ್ದರೂ ಮುಗಿದು ಹೋದ ಪ್ರಕರಣ

ಬಿಹಾರ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳು ಗಣನೀಯ ಸಂಖ್ಯೆಯ ಸಂಸದರನ್ನು ಲೋಕಸಭೆಗೆ ಆರಿಸಿ ಕಳಿಸುತ್ತವೆ. ಈ ರಾಜ್ಯಗಳ ಅಧಿಕಾರ ಹಿಡಿಯುವುದು ಲೋಕಸಭಾ ಚುನಾವಣೆಗಳಲ್ಲಿ ‘ಸ್ವಾಭಾವಿಕ ಮೇಲುಗೈ’ ಕಲ್ಪಿಸಿಕೊಡುತ್ತದೆ. ಗೆಲುವಿಗಾಗಿ ಯಾವ ನೈತಿಕ ಪಾತಾಳಕ್ಕೆ ಬೇಕಾದರೂ ಕುಸಿಯಲು ಸಿದ್ಧ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾರಿ ಹೇಳಿದೆ.

ಆದರೆ ಮತದಾರರು ಸಿಡಿದೆದ್ದರೆ ಯಾವ ತಂತ್ರಗಳೂ ಫಲ ನೀಡುವುದಿಲ್ಲ ಎಂಬುದು ಚರಿತ್ರೆ ಕಲಿಸಿರುವ ಪಾಠ. ನಿರಂತರ ಜನಜಾಗೃತಿಯೊಂದೇ ಜನತಂತ್ರಕ್ಕೆ ನೀಡಬಹುದಾದ ಬೆಲೆ ಎಂಬುದು ಕಾಲಾತೀತ ವೀವೇಕ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X