2022ರಲ್ಲಿ 19 ವರ್ಷದ ಯುವತಿ, ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಅವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಸೇರಿ ಮೂವರನ್ನು ಅಪರಾಧಿಗಳು ಎಂದು ಉತ್ತರಾಖಂಡ ನ್ಯಾಯಾಲಯ ತೀರ್ಪು ನೀಡಿದೆ.
ಪೌರಿ ಜಿಲ್ಲೆಯಲ್ಲಿ ರಿಷಿಕೇಶ ಬಳಿಯ ವನಂತರಾ ರೆಸಾರ್ಟ್‌ನಲ್ಲಿ ರೆಸೆಪ್ಷನಿಸ್ಟ್ ಆಗಿದ್ದ ಅಂಕಿತಾ ಭಂಡಾರಿ ಅವರನ್ನು 2022ರ ಸೆಪ್ಟೆಂಬರ್ 18ರಂದು ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ರೆಸಾರ್ಟ್‌ನ ಮಾಲೀಕನಾಗಿರುವ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ ಸೇರಿ ಮಾಡಿದ್ದಾರೆ ಎಂಬುದು ಸಾಬೀತಾಗಿದೆ.
ಮೇ 19ರಂದು ಪ್ರಕರಣದ ಅಂತಿಮ ವಾದಗಳನ್ನು ಆಲಿಸಿದ ಕೋಟ್ವಾರ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ರೀನಾ ನೇಗಿ ಅವರು ತೀರ್ಪನ್ನು ಮೇ 30ಕ್ಕೆ ಕಾಯ್ದಿರಿಸಿದ್ದರು. ಇದೀಗ, ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ ತೀರ್ಪು ನೀಡಿದ್ದಾರೆ. ಆದಾಗ್ಯೂ, ಶಿಕ್ಷೆಯ ಪ್ರಮಾಣವನ್ನು ಇನ್ನೂ ಘೋಷಿಸಿಲ್ಲ.
ಅಪರಾಧಿ ಪುಲ್ಕಿತ್ ಇತ್ತೀಚೆಗೆ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿನೋದ್ ಆರ್ಯ ಅವರ ಪುತ್ರ. ಪುಲ್ಕಿತ್ ಮತ್ತು ಅಂಕಿತಾ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿತ್ತು. ಆ ಕಾರಣಕ್ಕೆ ಪುಲ್ಕಿತ್ ಮತ್ತು ಆತನ ಸಹಚರರು ಅಂಕಿತಾ ಅವರನ್ನು ಕಾಲುವೆಯ ಬಳಿ ಎಳೆದೊಯ್ದು, ನಾಲುವೆಗೆ ತಳ್ಳಿದ್ದರು ಎಂದು ಆರೋಪಿಸಲಾಗಿತ್ತು. ಆಕೆಯ ಸಾವಿನ ವಿರುದ್ಧ ಉತ್ತರಾಖಂಡದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.
ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (SIT) ನ್ಯಾಯಾಲಯಕ್ಕೆ 500 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ವಿಚಾರಣೆಯ ಸಮಯದಲ್ಲಿ, ತನಿಖಾಧಿಕಾರಿ ಸೇರಿದಂತೆ 47 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.