ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಯುವಕರಿಗೆ ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಭಾಗ್ಯ ಕರುಣಿಸಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಸಾರ್ವಜನಿಕ ಭಾಷಣ ಮಾಡಿದ ಓವೈಸಿ, ಬಿಜೆಪಿ ಯೋಜನೆಗಳಾದ ಏಕರೂಪ ನಾಗರಿಕ ಸಂಹಿತೆ, ಸಿಎಎ, ನಿರುದ್ಯೋಗ, ಭಾರತ – ಚೀನಾ ಗಡಿ ವಿವಾದ ಹಾಗೂ ದ್ವೇಷ ಹರಡುವ ತಂತ್ರಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
“ದೇಶದ ಶೇ.60 ರಷ್ಟು ಜನಸಂಖ್ಯೆ 40 ವರ್ಷದೊಳಗಿನವರಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಈ ಜನಸಂಖ್ಯೆಗೆ ಅನುಕೂಲ ಕಲ್ಪಿಸುವುದನ್ನು ಬಿಟ್ಟು ಅದನ್ನು ನಾಶ ಪಡಿಸುತ್ತಿದ್ದಾರೆ. ಅವರು ತಮಗೆ 400 ಬರುತ್ತದೆ ಎಂದು ಹೇಳುತ್ತಾರೆ. ಆದರೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100ಕ್ಕಿಂತ ಹೆಚ್ಚು ದಾಟಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
ಬಿಜೆಪಿಯನ್ನು ಸೋಲಿಸಬೇಕೆಂದು ಪ್ರತಿಪಾದಿಸಿದ ಓವೈಸಿ, ದ್ವೇಷ ಹರಡುವುದರಿಂದ ಬಿಜೆಪಿ ಏನು ಲಾಭ ಗಳಿಸಿಕೊಂಡಿದೆ. ದೇಶವು ವರ್ಷದಿಂದ ವರ್ಷಕ್ಕೆ ದುರ್ಬಲಗೊಳ್ಳುತ್ತಿದೆ ಎಂದು ಓವೈಸಿ ಹೆಳಿದರು.
“ಇತ್ತೀಚಿಗೆ ಇಲ್ಲಿನ ಬಿಜೆಪಿಯ ಅಭ್ಯರ್ಥಿಯೊಬ್ಬರು ಮಸೀದಿಯನ್ನು ನಾಶ ಪಡಿಸುವಂತ ಸನ್ನೆಯನ್ನು ಮಾಡಿದ್ದರು. ಇದು ಬಿಜೆಪಿಯು ಹೈದರಾಬಾದ್‌ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ನೆಮ್ಮದಿಯನ್ನು ಹಾಳುಮಾಡಲು ಬಯಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿಯಾದ ಮಾಧವಿ ಲತಾ ಎಂಬುವವರು ಎರಡು ದಿನಗಳ ಹಿಂದೆ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಅಣಕು ಸನ್ನೆಯಲ್ಲಿ ಬಿಲ್ಲು ಬಾಣದ ಮೂಲಕ ಮಸೀದಿಯತ್ತ ಗುರಿಯಿಟ್ಟವರಂತೆ ತೋರಿಸಿದ್ದು ಎಲ್ಲಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ನಂತರ ಬಿಜೆಪಿ ಅಭ್ಯರ್ಥಿ ಕ್ಷಮೆ ಕೋರಿದ್ದರು.
ಓವೈಸಿ ಹೈದರಾಬಾದ್‌ನಿಂದ ಲೋಕಸಭೆಗೆ ಐದನೇ ಬಾರಿ ಪುನರಾಯ್ಕೆ ಬಯಸಿದ್ದಾರೆ.
