ವಿಧಾನಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂಬುದನ್ನು ಅರಿತಿರುವ ಬಿಜೆಪಿ, ತನ್ನ ಕೊನೆಯ ದಾಳವಾಗಿರುವ ಕೇಂದ್ರೀಯ ಸಂಸ್ಥೆಗಳನ್ನು ಬಳಕೆ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜಸ್ಥಾನ ಚುನಾವಣೆಯಲ್ಲಿ ಸೋಲು ಖಚಿತವಾದ ಹಿನ್ನೆಲೆ ಬಿಜೆಪಿ ತನ್ನ ಕೊನೆಯ ದಾಳವನ್ನು ಪ್ರಯೋಗಿಸಿದೆ. ಇಡಿ, ಸಿಬಿಐ, ಐಟಿಯನ್ನು ಬಳಕೆ ಮಾಡುತ್ತಿದೆ. ಛತ್ತೀಸ್‌ಗಢದ ನಂತರ ರಾಜಸ್ಥಾನದ ಕಾಂಗ್ರೆಸ್ ನಾಯಕರ ವಿರುದ್ಧ ಇಡಿ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
‘ನರೇಂದ್ರ ಮೋದಿ ಸರ್ಕಾರದ ಸರ್ವಾಧಿಕಾರ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಬಿಜೆಪಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟಿವಿ ನೇರ ಪ್ರಸಾರದಲ್ಲಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿದ ಬಿಆರ್‌ಎಸ್ ಶಾಸಕ!
ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಸ್ರಾ ಮತ್ತು ಮಹುವಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಶಾಲಾ ಶಿಕ್ಷಣ ಖಾತೆಯ ಮಾಜಿ ಸಚಿವ ದೋತಸ್ರಾ ಅವರ ಸಿಕರ್ ಮತ್ತು ಜೈಪುರದ ನಿವಾಸ, ದೌಸಾದ ಮಹುವಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಓಂಪ್ರಕಾಶ್ ಹುಡ್ಲಾ ಮತ್ತು ಇತರ ಕೆಲವರ ನಿವಾಸಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಇಡಿ ದಾಳಿ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
चुनाव आते ही ED, CBI, IT आदि भाजपा के असली 'पन्ना प्रमुख' बन जाते हैं।
राजस्थान में अपनी निश्चित हार को देखते हुए भारतीय जनता पार्टी ने चला अपना आख़िरी दाँव !
ED ने छत्तीसगढ़ के बाद राजस्थान में भी विधानसभा चुनाव अभियान में उतरते हुए कांग्रेसी नेताओं के ख़िलाफ़ कार्रवाई शुरू…
— Mallikarjun Kharge (@kharge) October 26, 2023
ಅಶೋಕ್ ಗೆಹ್ಲೋಟ್ ಪುತ್ರನಿಗೆ ಇಡಿ ಸಮನ್ಸ್
ವಿದೇಶಿ ವಿನಿಮಯ ಕಾನೂನು(ಫೆಮಾ) ಉಲ್ಲಂಘಿಸಿದ ಪ್ರಕರಣದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ಶುಕ್ರವಾರ ಜೈಪುರ ಅಥವಾ ನವದೆಹಲಿಯಲ್ಲಿರುವ ಫೆಡರಲ್ ಏಜೆನ್ಸಿಯ ಕಚೇರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ವೈಭವ್ ಗೆಹ್ಲೋಟ್ ಅವರಿಗೆ ಸೂಚಿಸಲಾಗಿದೆ.
ರಾಜಸ್ಥಾನ ಮೂಲದ ಹಾಸ್ಪಿಟಾಲಿಟಿ ಗ್ರೂಪ್ ಟ್ರಿಟಾನ್ ಹೋಟೆಲ್ಸ್ ಆಂಡ್ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್, ವರ್ಧಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕ ಹಾಗೂ ಪ್ರವರ್ತಕರಾದ ಶಿವಶಂಕರ್ ಶರ್ಮಾ, ರತ್ತನ್ ಕಾಂತ್ ಶರ್ಮಾ ಮತ್ತು ಇತರರ ವಿರುದ್ಧದ ಇತ್ತೀಚಿನ ಇಡಿ ದಾಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ.