ಸೆಪ್ಟೆಂಬರ್ 21 ರಂದು ಲೋಕಸಭೆಯ ಅಧಿವೇಶನದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಡ್ಯಾನಿಶ್ ಅಲಿ ವಿರುದ್ಧದ ‘ಆಕ್ಷೇಪಾರ್ಹ’ ಹೇಳಿಕೆಗೆ ವಿಷಾದಿಸುವುದಾಗಿ ಬಿಜೆಪಿ ಸಂಸದ ರಮೇಶ್ ಬಿಧುರಿ ಗುರುವಾರ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ನಡೆದ ಲೋಕಸಭೆಯ ವಿಶೇಷಾಧಿಕಾರ ಸಮಿತಿ ಸಭೆಯಲ್ಲಿ ಉಭಯ ನಾಯಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಲಾಗಿತ್ತು. ಸಮಿತಿಯಲ್ಲಿದ್ದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ರಮೇಶ್ ಬಿಧುರಿ ಅವರು ತಾವು ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಸಮಿತಿಯು ಡಿಸೆಂಬರ್ 7 ರಂದು ಮೌಖಿಕ ಸಾಕ್ಷ್ಯವನ್ನು ನೀಡಲು ರಮೇಶ್ ಬಿಧುರಿ (ಮುಸ್ಲಿಂ-ವಿರೋಧಿ ನಿಂದನೆಯನ್ನು ಬಳಸಿದ್ದಕ್ಕಾಗಿ) ಮತ್ತು ಡ್ಯಾನಿಶ್ ಅಲಿ (ಸದನದಲ್ಲಿ ಚಂದ್ರಯಾನ-2 ಚರ್ಚೆಯ ವೇಳೆ ಅನುಚಿತ ವರ್ತನೆಗಾಗಿ) ಅವರನ್ನು ಕರೆದಿತ್ತು.
ಸೆಪ್ಟೆಂಬರ್ 21 ರಂದು ಲೋಕಸಭೆಯಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಚರ್ಚೆಯಲ್ಲಿ ಮಾತನಾಡುತ್ತಿದ್ದಾಗ ಬಿಎಸ್‌ಪಿ ಸದಸ್ಯ ಡ್ಯಾನಿಶ್ ಅಲಿ ಅವರನ್ನು ಗುರಿಯಾಗಿಸಿಕೊಂಡು ರಮೇಶ್ ಬಿಧುರಿ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು, ನಂತರ ಈ ವಾಕ್ಯಗಳನ್ನು ದಾಖಲೆಗಳಿಂದ ಹೊರಹಾಕಲಾಯಿತು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಿಂದ ಮತ್ತೊಬ್ಬ ಯೋಗಿಗೆ ಸಿಎಂ ಪಟ್ಟ? ಯಾರೀತ ಬಾಬಾ ಬಾಲಕನಾಥ?
ಆ ಸಮಯದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿರೋಧ ಪಕ್ಷದ ಸದಸ್ಯರನ್ನು ನೋಯಿಸಿದರೆ ಅವುಗಳನ್ನು ಕಲಾಪದಿಂದ ತೆಗೆದುಹಾಕುವಂತೆ ಸಭಾಪತಿಯನ್ನು ಒತ್ತಾಯಿಸಿದರು.
“ಸದಸ್ಯರು ಮಾಡಿದ ಹೇಳಿಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ರಕ್ಷಣಾ ಸಚಿವರು ಹೇಳಿದರು.
ಇದನ್ನು ಅನುಸರಿಸಿ ಪ್ರತಿಪಕ್ಷದ ಸದಸ್ಯರು ಮೇಜುಗಳನ್ನು ತಟ್ಟುವುದರ ಮೂಲಕ ರಾಜನಾಥ್ ಅವರ ಇಂಗಿತವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಸದಸ್ಯ ಕೆ. ಸುರೇಶ್ ಮಾತನಾಡಿ, ಆಕ್ಷೇಪಾರ್ಹ ಹೇಳಿಕೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ ಎಂದು ಹೇಳಿದರು.
ಡ್ಯಾನಿಶ್ ಅಲಿ ವಿರುದ್ಧ ಬಿಧುರಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಕ್ಕೆ ಸಂಬಂಧಿಸಿದ ಸಂಸದರ ದೂರುಗಳನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸೆಪ್ಟೆಂಬರ್‌ನಲ್ಲಿ ವಿಶೇಷಾಧಿಕಾರ ಸಮಿತಿಗೆ ಶಿಫಾರಸ್ಸು ಮಾಡಿದ್ದರು.
ಅಲಿ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಡಿಎಂಕೆಯ ಕನಿಮೋಳಿ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಬಿಧುರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಆದರೆ ನಿಶಿಕಾಂತ್ ದುಬೆಯಂತಹ ಹಲವಾರು ಬಿಜೆಪಿ ಸಂಸದರು ಬಿಎಸ್‌ಪಿ ಸದಸ್ಯರು ಬಿಧುರಿ ಅವರನ್ನು “ಪ್ರಚೋದನೆ” ಮಾಡಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ತಮ್ಮ ಪಕ್ಷದ ಸಂಸದರನ್ನು ಸಮರ್ಥಿಸಿಕೊಂಡರು.
ಸಮಿತಿಯ ಮುಂದೆ ಹಾಜರಾದ ಡ್ಯಾನಿಶ್ ಅಲಿ ಅವರು ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿರುವ ಆರೋಪವನ್ನು ತಿರಸ್ಕರಿಸಿದರು.
ಡ್ಯಾನಿಶ್ ಅವರ ಬಗ್ಗೆ ಬಿಜೆಪಿ ಸಂಸದ ರಮೆಶ್ ಬಿಧುರಿ “ಮುಲ್ಲಾ” “ಆತಂಕವಾದಿ”(ಭಯೋತ್ಪಾದಕ) ಮತ್ತು “ಉಗ್ರವಾದಿ” (ಉಗ್ರವಾದಿ) ಎಂದು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.