ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಸಿಜೆಪಿ ನಾಯಕರ ವಿರುದ್ಧ ಮಂಗಳವಾರ ₹2 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ದೆಹಲಿ ಹೈಕೋರ್ಟ್‌ನಲ್ಲಿ ಈ ಮಹತ್ವದ ಪ್ರಕರಣದ ವಿಚಾರಣೆ ನಡೆಯಲಿದೆ.
ಸಿಜೆಪಿ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಅಭಿಜೀತ್ ದೀಪ್ಕೆ ಹಾಗೂ ಸಹ-ಸಂಚಾಲಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಎಕ್ಸ್ ಜಾಲತಾಣದಲ್ಲಿ ನ್ಯಾಯಾಲಯದ ದಾಖಲೆಗಳನ್ನು ಹಂಚಿಕೊಂಡಿರುವ ಭಾಟಿಯಾ, ‘ನಾಳೆ ಕೋರ್ಟ್‌ನಲ್ಲಿ ಬಲವಾದ ವಾದಗಳು ಪ್ರತಿಧ್ವನಿಸಲಿವೆ. ಸುಳ್ಳಿನ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಾಗುವುದು’ ಎಂದು ಜಿರಳೆಯ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ.
‘ಆಧಾರರಹಿತ ಆರೋಪಗಳು ಮಿತಿ ಮೀರಿದಾಗ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿನ ವಿಚಾರಣೆಯಾಗಲೀ, ಹೇಳಿಕೆಗಳ ಸಮರವಾಗಲೀ ಇಲ್ಲಿ ನಡೆಯುವುದಿಲ್ಲ. ಸತ್ಯದ ಪರೀಕ್ಷೆಯು ನ್ಯಾಯಾಲಯದಲ್ಲೇ ನಡೆಯಲಿದೆ’ ಎಂದು ಭಾಟಿಯಾ ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೌರವ್ ದಾಸ್, ‘ಅತ್ತಿತ್ತ ಅಲೆದಾಡಿಕೊಂಡು ತಪ್ಪಿ ಗ್ರೇಟರ್ ನೋಯ್ಡಾ ಕೋರ್ಟ್‌ಗೆ ಹೋಗಬೇಡಿ!’ ಎಂದು ನಗುವ ಎಮೋಜಿಯೊಂದಿಗೆ ವ್ಯಂಗ್ಯವಾಡಿದ್ದಾರೆ.
ಕಳೆದ ವಾರ ಭಾಟಿಯಾ ಮತ್ತು ದಾಸ್ ನಡುವೆ ನಡೆದಿದ್ದ ವಾಕ್ಸಮರದ ಮುಂದುವರಿದ ಭಾಗವಾಗಿ ಈ ಕೇಸ್ ದಾಖಲಾಗಿದೆ. ಸ್ವತಂತ್ರ ಭಾರದ್ವಾಜ್ ಎಂಬಾತನನ್ನು ಗೌರವ್ ಭಾಟಿಯಾ ‘ದಿಮಾಗಿ ನಕ್ಸಲ್’ ಎಂದು ಕರೆದಿದ್ದಾರೆ ಎನ್ನಲಾದ ಪೋಸ್ಟ್ ಅನ್ನು ಸೌರವ್ ಹಂಚಿಕೊಂಡಿದ್ದರು. ಅದು ‘ನಕಲಿ’ ಪೋಸ್ಟ್ ಎಂದು ಸ್ಪಷ್ಟಪಡಿಸಿದ್ದ ಭಾಟಿಯಾ, ಕೂಡಲೇ ಅದನ್ನು ಅಳಿಸಿಹಾಕಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.
ಅದು ‘ಕೃತಕ ಬುದ್ಧಿಮತ್ತೆ’ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಪೋಸ್ಟ್ ಎಂಬುದನ್ನು ಒಪ್ಪಿಕೊಂಡು ಪೋಸ್ಟ್ ಡಿಲೀಟ್ ಮಾಡಿದ್ದ ಸೌರವ್ ದಾಸ್, ಕ್ಷಮೆ ಕೇಳಲು ನಿರಾಕರಿಸಿದ್ದರು. ಅಲ್ಲದೆ, ಇದೇ ಮಾತನ್ನು ಪುನರುಚ್ಚರಿಸುವಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದರು. ಕೇವಲ ಪೋಸ್ಟ್ ಡಿಲೀಟ್ ಮಾಡಿ ಓಡಿಹೋದರೆ ಸಾಲದು, ಬೇಷರತ್ ಕ್ಷಮೆ ಕೇಳದಿದ್ದರೆ ಎಫ್‌ಐಆರ್ ದಾಖಲಿಸುವುದಾಗಿ ಭಾಟಿಯಾ ಎಚ್ಚರಿಕೆ ನೀಡಿದ್ದರು.
ವಿದ್ಯಾರ್ಥಿ ಹೋರಾಟಗಾರನೊಬ್ಬನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾಗಿ ಮತ್ತು ರಾಜಕೀಯ ಪ್ರಭಾವದಿಂದ ಬಂಧನದಿಂದ ಪಾರಾಗಿದ್ದಾಗಿ ಸ್ವತಂತ್ರ ಭಾರದ್ವಾಜ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ. ಈತನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಸಿಜೆಪಿ ಕಾರ್ಯಕರ್ತರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ತೀವ್ರ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಆತನನ್ನು ಬುಲಂದ್‌ಶಹರ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.





