ಬಿಜೆಪಿ ನನ್ನ ಹಾಗೂ ನನ್ನ ಸಂಬಂಧಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯನ್ನು ಗುರಿಯಾಗಿಸಿಕೊಂಡು ಪಿತೂರಿ ನಡೆಸುತ್ತಿದ್ದು, ನಮಗೆ ಸುರಕ್ಷಿತವಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಸೋಮವಾರ ದೊಡ್ಡ ವರದಿ ಸ್ಫೋಟಗೊಳ್ಳಲಿದ್ದು, ಟಿಎಂಸಿ ಹಾಗೂ ಅಲ್ಲಿನ ನಾಯಕರಿಗೆ ನಡುಕ ಶುರುವಾಗಲಿದೆ ಎಂದು ವಿಪಕ್ಷ ನಾಯಕ ಸುವೆಂದು ಅಧಿಕಾರಿ ಹೇಳಿಕೆ ನೀಡಿದ ಒಂದು ದಿನದ ನಂತರ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬಲೂರ್‌ಘಾಟ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಸಚಿವ ಬಿಪ್ಲಬ್ ಮಿತ್ರ ಪರವಾಗಿ ಮತಯಾಚಿಸುವ ಸಂದರ್ಭದಲ್ಲಿ ಮಾತನಾಡಿದರು.
“ಬಿಜೆಪಿ ನನ್ನ ಹಾಗೂ ಅಭಿಷೇಕ್ ನಡುವೆ ಪಿತೂರಿ ನಡೆಸುತ್ತಿದೆ. ನಾವು ಸುರಕ್ಷಿತವಲ್ಲ. ನಾವು ಕೇಸರಿ ಪಕ್ಷದ ಪಿತೂರಿಗೆ ಕೂಡ ಭಯಗೊಂಡಿದ್ದೇವೆ. ಟಿಎಂಸಿ ನಾಯಕರು ಹಾಗೂ ಪಶ್ಚಿಮ ಬಂಗಾಳದ ಜನತೆಯ ವಿರುದ್ಧ ಪಿತೂರಿ ನಡೆಸುತ್ತಿರುವವರ ವಿರುದ್ಧ ಎಚ್ಚರವಾಗಿರುವಂತೆ ನಾವು ಪ್ರತಿಯೊಬ್ಬರಲ್ಲೂ ಆಗ್ರಹಿಸುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಡಿ ಎಂಬ ತನಿಖಾ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದೇ ಮೋದಿಯ ‘ಮಹಾನ್’ ಸಾಧನೆ
“ತಮ್ಮ ಕುಟುಂಬ ಹಾಗೂ ಅಕ್ರಮ ಆಸ್ತಿ ರಕ್ಷಿಸಿಕೊಳ್ಳಲು ಸುವಿಂದು ಅಧಿಕಾರಿ ಬಿಜೆಪಿ ಸೇರ್ಪಡೆಗೊಂಡಿದ್ದು, ಆತನೊಬ್ಬ ದ್ರೋಹಿ. ನಾನು ಆ ವ್ಯಕ್ತಿಗೆ ಹೇಳಬಯಸುತ್ತೇನೆ, ಆತನ ಬೆದರಿಕೆ ಚಾಕೋಲೆಟ್ ಬಾಂಬ್‌ನಂತೆ ಸ್ಪೋಟಗೊಳ್ಳಲಿದ್ದು, ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
“ಆತನ ಅಸ್ತ್ರಕ್ಕೆ ನಾವು ದೊಡ್ಡ ಪಟಾಕಿಗಳ ಪ್ರತಿಅಸ್ತ್ರ ಹೂಡುತ್ತೇವೆ. ಬಿಜೆಪಿ ಸರ್ಕಾರ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡಿರುವುದಾಗಿ ಹೇಳಿರುವ ಸುಳ್ಳು ಅವರು ನೀಡಿರುವ ಹಳೆಯ ಅಸ್ತ್ರಕ್ಕೆ ಸಾಕ್ಷಿಯಾಗಿದೆ. ಡಿಡಿ ನ್ಯೂಸ್ ಬಣ್ಣವನ್ನು ಕೇಸರೀಕರಣಗೊಳಿಸಿ ಬಣ್ಣವನ್ನು ಕೂಡ ಬಿಜೆಪಿ ಸ್ವಾಧೀನ ಪಡಿಸಿಕೊಳ್ಳಲು ಹೊರಟಿದೆ. ಇದು ದೇಶಕ್ಕಾಗಿ ಯುಗಯುಗಾಂತರಗಳಿಂದ ತ್ಯಾಗ ಮಾಡಿದ ಸನ್ಯಾಸಿಗಳು ಹಾಗೂ ಧಾರ್ಮಿಕ ಗುರುಗಳಿಗೆ ಮಾಡಿದ ಅವಮಾನ” ಎಂದು ಮಮತಾ ಬ್ಯಾನರ್ಜಿ ಖಂಡಿಸಿದರು.
“ಡಿಡಿ ಲೋಗೊವನ್ನು ಏಕೆ ಕೇಸರೀಕರಣಗೊಳಿಸಿದರು? ಸೇನಾ ಸಿಬ್ಬಂದಿಯ ಅಧಿಕೃತ ನಿವಾಸಗಳಿಗೆ ಏಕೆ ಕೇಸರಿ ಬಣ್ಣ ಹೊಡೆಸಲಾಗಿದೆ? ವಾರಣಾಸಿಯ ಪೊಲೀಸರ ಸಮವಸ್ತ್ರಗಳನ್ನು ಏಕೆ ಕೇಸರೀಕರಣಗೊಳಿಸಲಾಗಿದೆ? ನಾವು ಡಿಡಿ ಲೋಗೋ ಬದಲಿಸಿರುವುದನ್ನು ಬಲವಾಗಿ ಖಂಡಿಸುತ್ತೇವೆ. ಇದು ಸರ್ವಾಧಿಕಾರ ಆಡಳಿತದ ಮತ್ತೊಂದು ನಿದರ್ಶನ. ಇವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭವಿಷ್ಯದಲ್ಲಿ ಚುನಾವಣೆ ಇಲ್ಲದಂತೆ ಮಾಡಿ ಇತರ ಅಲ್ಪಸಂಖ್ಯಾತರಿಗೆ ಅಪಾಯ ತಂದೊಡ್ಡಲಿದ್ದಾರೆ” ಎಂದು ಮಮತಾ ಆತಂಕ ವ್ಯಕ್ತಪಡಿಸಿದರು.
