ದೆಹಲಿ ಆಪ್ ಸಚಿವ ಕೈಲಾಶ್ ಗಹ್ಲೋಟ್ ಬಿಜೆಪಿ ಸೇರಿದ್ದಾರೆ. ಬಿಜೆಪಿಯ ವಾಷಿಂಗ್ ಮಷೀನ್‌ನಲ್ಲಿ ಗಹ್ಲೋಟ್ ಅವರ ವಿರುದ್ದದ ಆರೋಪ ಎಂಬ ಕೊಳೆ ತೊಳೆದು ಹೋಗಲಿದೆ ಎಂಬ ಅಭಿಪ್ರಾಯಗಳಿವೆ. ಅದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಗಹ್ಲೋಟ್ ವಿರುದ್ಧದ ತನಿಖೆಯನ್ನ ಸಿಬಿಐ ನಿಧಾನಗೊಳಿಸಿದೆ. ಮುಂದೆ, ಸಾಕ್ಷಿಗಳಿಲ್ಲವೆಂದು ಖುಲಾಸೆಯನ್ನೂ ಮಾಡಬಹುದು...
ದೆಹಲಿ ಸರ್ಕಾರದ ಪ್ರಭಾವಿ ಸಚಿವ ಕೈಲಾಶ್ ಗಹ್ಲೋಟ್ ಅವರು ಎಎಪಿ ತೊರೆದು, ಬಿಜೆಪಿ ಸೇರಿದ್ದಾರೆ. ಸಚಿವ ಸ್ಥಾನವನ್ನೂ ಬಿಟ್ಟಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಒತ್ತಡದಿಂದಾಗಿ ದೆಹಲಿಯ ಆಡಾಳಿತಾರೂಢ ಎಎಪಿಯನ್ನು ತೊರೆದಿಲ್ಲ. ಸ್ವ-ಇಚ್ಛೆಯಿಂದ ಬಿಜೆಪಿಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಎಎಪಿಯ ರಾಜಕೀಯ ಮಹತ್ವಾಕಾಂಕ್ಷೆಗಳು ಜನರ ಕಡೆಗಿನ ಬದ್ಧತೆಯನ್ನು ಮರೆತಿದೆ. ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು ಸ್ವಂತ ರಾಜಕೀಯ ಹಿತಾಸಕ್ತಿಗಾಗಿ ಹೆಚ್ಚು ಕೆಲಸ ಮಾಡುತ್ತಿದೆ. ಕೇಜ್ರಿವಾಲ್ ಅವರು ಆಯೋಗ ಮತ್ತು ಮುಜುಗರದ ವಿವಾದಗಳಿಗೆ ಸಿಕ್ಕಿಕೊಂಡ ಮೇಲೂ ಪಕ್ಷವು ‘ಆಮ್ ಆದ್ಮಿ'(ಸಾಮಾನ್ಯ ಜನ)ಗಳ ಪಕ್ಷವಾಗಿ ಉಳಿದಿದೆ ಎಂದು ನಂಬಲಾಗದು ಎಂದಿದ್ದಾರೆ.
ಜಾಟ್ ಸಮುದಾಯದ ಪ್ರಭಾವಿ ನಾಯಕರಾಗಿರುವ ಗಹ್ಲೋಟ್ ಅವರು ಈಗ ಬಿಜೆಪಿ ಸೇರಿದ್ದಾರೆ. ತಮ್ಮ ಮೂಲ ಪಕ್ಷ ಎಎಪಿಯನ್ನು ದೂರುತ್ತಿದ್ದಾರೆ. ಆದರೆ, ಗಹ್ಲೋಟ್ ಅವರು ಸೇರಿರುವ ಇದೇ ಬಿಜೆಪಿ ಗಹ್ಲೋಟ್ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು. 2020ರಲ್ಲಿ ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ 1,000 ಬಸ್ಸುಗಳ ನಿರ್ವಹಣೆಯ 4,500 ಕೋಟಿ ರೂಪಾಯಿಯ ಗುತ್ತಿಗೆಯಲ್ಲಿ ಗಹ್ಲೋಟ್ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.
ಬಳಿಕ, ಗಹ್ಲೋಟ್ ವಿರುದ್ಧ ಸಿಬಿಐ, ಇಡಿ ಸಂಸ್ಥೆಗಳು ಪ್ರಕರಣ ದಾಖಲಿಸಿಕೊಂಡಿದ್ದವು. ಪ್ರಕರಣ ದಾಖಲಾದ ಬೆನ್ನಲ್ಲೇ 2020ರಲ್ಲಿ ದೆಹಲಿ ರಾಜ್ಯಪಾಲರಾಗಿದ್ದ ಅನಿಲ್ ಬೈಜಾಲ್ ಅವರು ಬಸ್‌ಗಳ ನಿರ್ವಹಣೆಯ ಟೆಂಡರ್‌ಅನ್ನೇ ರದ್ದುಗೊಳಿಸಿದರು. ಬಿಜೆಪಿ ಅಖಾಡಕ್ಕಿಳಿದು, ಗಹ್ಲೋಟ್ ಮತ್ತು ಕೇಜ್ರಿವಾಲ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು. ಪ್ರತಿಭಟನೆಗಳನ್ನು ನಡೆಸಿತು. ಆದಾಗ್ಯೂ, ಗಹ್ಲೋಟ್ ಅವರನ್ನು ಬಿಟ್ಟುಕೊಡದ ಕೇಜ್ರಿವಾಲ್ ಅವರ ಬೆನ್ನಿಗೆ ನಿಂತರು.
ಆದರೆ, 2020ರಿಂದಲೂ ಭ್ರಷ್ಟಾಚಾರ ಪ್ರಕರಣ ಸಿಬಿಐ ಕಚೇರಿಯಲ್ಲಿಯೇ ಸುತ್ತುತ್ತಿದೆ. ಇತ್ತ, ಈ ಹಿಂದೆ ಬಿಜೆಪಿ ವಿರುದ್ಧ ಅಬ್ಬರಿಸುತ್ತಿದ್ದ ಗಹ್ಲೋಟ್ ಅವರು, ತಮ್ಮ ವಿರುದ್ಧ ಪ್ರಕರಣ ದಾಖಲಾದ ಬಳಿಕ ಮೌನಕ್ಕೆ ಜಾರಿದ್ದರು. ಗಹ್ಲೋಟ್ ಅವರ ಮೌನ, ಸಿಬಿಐ ಆಮೆಗತಿಯ ತನಿಖೆಯ ನಡುವೆ, ಅಬಕಾರಿ ನೀತಿ ಹಗರಣದ ಆರೋಪಗಳನ್ನೂ ಬಿಜೆಪಿ ಎಳೆದುತಂದಿತು. ಸಿಬಿಐ, ಇಡಿ ಮತ್ತೆ ಅಖಾಡಕ್ಕೆ ಇಳಿದವು. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಚಿವ ಸತ್ಯೆಂದರ್ ಜೈನ್ ಹಾಗೂ ಬಿಆರ್‌ಎಸ್ ನಾಯಕ ಕೆ ಕವಿತಾ ಅವರನ್ನು ಬಂಧಿಸಿದವು. ಲೋಕಸಭಾ ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಅವರನ್ನೂ ಮೊದಲು ಇಡಿ, ಬಳಿಕ ಸಿಬಿಐ ಬಂಧಿಸಿತು.
ಈ ಪ್ರಕರಣದಲ್ಲಿಯೂ ಗಹ್ಲೋಟ್ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿತು. ಅಬಕಾರಿ ನೀತಿ ಕರಡು ರಚನೆಯಲ್ಲಿ ಸಿಸೋಡಿಯಾ, ಜೈನ್ ಜೊತೆಗೆ ಗಹ್ಲೋಟ್ ಅವರೂ ಭಾಗಿಯಾಗಿದ್ದರು ಎಂದು ತನಿಖಾ ಸಂಸ್ಥೆಗಳೂ ಹೇಳಿದವು. ಆದಾಗ್ಯೂ, ಗಹ್ಲೋಟ್ ಅವರನ್ನು ತನಿಖಾ ಸಂಸ್ಥೆಗಳು ಬಂಧಿಸಲಿಲ್ಲ.
ಈ ವರದಿ ಓದಿದ್ದೀರಾ?: ಬಿಜೆಪಿ ಎಂಬ ಗ್ರೇಟ್ ಇಂಡಿಯನ್ ವಾಶಿಂಗ್ ಮಶೀನ್!
ಈ ನಡುವೆ, ದೆಹಲಿ ರಾಜ್ಯಪಾಲರ ವಿರುದ್ಧ ದೆಹಲಿಯ ಎಲ್ಲ ಸಚಿವರೂ ಸಿಡಿದೆದ್ದಿದ್ದರು. ಸರ್ಕಾರದ ಎಲ್ಲ ಕೆಲಸಗಳಲ್ಲೂ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿದ್ದರು. ರಾಜ್ಯಪಾಲರು ಕರೆಯುವ ಸಭೆಗಳಿಗೆ ಹಾಜರಾಗುವುದಿಲ್ಲ ಎಂದು ನಿರ್ಧರಿಸಿದ್ದರು. ಆದರೂ, ಗಹ್ಲೋಟ್ ಅವರು ರಾಜ್ಯಪಾಲರು ಕರೆಯುವ ಎಲ್ಲ ಸಭೆಗಳಲ್ಲಿಯೂ ಭಾಗಿಯಾಗುತ್ತಿದ್ದರು. ಇದು, ಗಹ್ಲೋಟ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಣತಿಗೆ ತಲೆಬಾಗುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿತ್ತು.
ಅತ್ತ, ಕೇಜ್ರಿವಾಲ್ ಮತ್ತು ದೆಹಲಿ ಸರ್ಕಾರ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದ ಬಿಜೆಪಿ ಕೈಲಾಶ್ ಗಹ್ಲೋಟ್ ಅವರ ಬಗ್ಗೆ ಮೌನತಾಳಿತು. ಮೃದು ಧೋರಣೆ ತಳೆಯಿತು. ಗಹ್ಲೋಟ್ ಅವರ ವಿರುದ್ಧ ತಾನೇ ಮಾಡಿದ್ದ ಆರೋಪಗಳ ಬಗ್ಗೆ ಮತ್ತೆ ಬಿಜೆಪಿ ಮಾತನಾಡಲಿಲ್ಲ.
ಮುಂದುವರೆದು, ಈ ವರ್ಷದ 2024ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿಯಾಗಿದ್ದರು. ಜೈಲಿನಲ್ಲಿದ್ದರು. ತಾವು ಜೈಲಿನಲ್ಲಿರುವ ಕಾರಣ, ಧ್ವಜಾರೋಹಣವನ್ನು ಅಂದಿನ ಶಿಕ್ಷಣ ಸಚಿವೆ, ಈಗಿನ ಮುಖ್ಯಮಂತ್ರಿ ಆತಿಶಿ ಮಾಡಬೇಕೆಂದು ಕೇಜ್ರಿವಾಲ್ ಸೂಚಿಸಿದ್ದರು. ಆದರೆ, ರಾಜ್ಯಪಾಲರು ಕೈಲಾಶ್ ಗಹ್ಲೋಟ್ ಅವರನ್ನೇ ಕರೆತಂದು ಧ್ವಜಾರೋಹಣ ಮಾಡಿಸಿದರು. ಇದರ ಹಿಂದೆ, ಗಹ್ಲೋಟ್ ಅವರು ಬಿಜೆಪಿಗೆ ತಲೆಬಾಗಿದ್ದನ್ನು ತೋರಿಸಿತು.

ಸದ್ಯ, ರಾಜಪಾಲರ ದಯೆ ಮತ್ತು ಬಿಜೆಪಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದ ಗಹ್ಲೋಟ್ ಅವರು ಈಗ ಬಿಜೆಪಿ ಸೇರಿದ್ದಾರೆ. ಬಿಜೆಪಿಗರು ಗಹ್ಲೋಟ್ ಅವರನ್ನು ಎಎಪಿಯಲ್ಲಿದ್ದ ಪ್ರಾಮಾಣಿಕ ಎಂಬಂತೆ ಮಾತನಾಡುತ್ತಿದ್ದಾರೆ. ಈಗಾಗಲೇ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಛಗ್ಗನ್ ಭುಜಬಲ್, ಹಸನ್ ಮುಶ್ರಿಫ್, ಪ್ರಫುಲ್ ಪಟೇಲ್, ಜ್ಯೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಹಲವರು ಬಿಜೆಪಿ ಸೇರಿ ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ಮುಕ್ತರಾಗಿದ್ದಾರೆ. ಇದೀಗ, ಬಿಜೆಪಿಯ ವಾಷಿಂಗ್ ಮಷೀನ್‌ನಲ್ಲಿ ಗಹ್ಲೋಟ್ ಅವರ ವಿರುದ್ದದ ಆರೋಪ ಎಂಬ ಕೊಳೆ ತೊಳೆದು ಹೋಗಲಿದೆ ಎಂಬ ಅಭಿಪ್ರಾಯಗಳಿವೆ. ಅದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಗಹ್ಲೋಟ್ ವಿರುದ್ಧದ ತನಿಖೆಯನ್ನ ಸಿಬಿಐ ನಿಧಾನಗೊಳಿಸಿದೆ. ಮುಂದೆ, ಸಾಕ್ಷಿಗಳಿಲ್ಲವೆಂದು ಖುಲಾಸೆಯನ್ನೂ ಮಾಡಬಹುದು.