ಉತ್ತರಾಖಂಡದ 19 ವರ್ಷದ ಅಂಕಿತಾ ಭಂಡಾರಿ ಕೊಲೆ ಪ್ರಕರಣ ಮತ್ತೊಂದು ಸ್ಪೋಟಕ ತಿರುವು ಪಡೆದುಕೊಂಡಿದೆ. ಸಿಕ್ಕಿಂ ನೂತನ ರಾಜ್ಯಪಾಲ ದುಷ್ಯಂತ್ ಗೌತಮ್ ಜೊತೆ ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಆರೋಪಗಳ ಬಗ್ಗೆ ಬಿಜೆಪಿ ನಾಯಕರು ಮೌನ ವಹಿಸಿದ್ದು, ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಅವರು ಇದನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ನಟಿ ಊರ್ಮಿಳಾ ಸನಾವರ್ ಅವರು ಡೆಹ್ರಾಡೂನ್ ಸಿಬಿಐ ನ್ಯಾಯಾಲಯದ ಮುಂದೆ ಎರಡು ಸರಳ ಆದರೆ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮೊದಲನೆಯದಾಗಿ, ಅಂಕಿತಾ ಕೇಸ್‌ನಲ್ಲಿ ಕೇಳಿಬರುತ್ತಿರುವ ಶಂಕಿತ ‘ವಿಐಪಿ’ ವ್ಯಕ್ತಿಯೇ ದುಷ್ಯಂತ್ ಗೌತಮ್ ಎಂದು ಅವರು ಹೇಳಿದ್ದಾರೆ. ಎರಡನೆಯದಾಗಿ, ಬಿ.ಎಲ್. ಸಂತೋಷ್ ಅವರಿಗಾಗಿ ದುಷ್ಯಂತ್ ಗೌತಮ್ ಹುಡುಗಿಯರನ್ನು ಪೂರೈಸುತ್ತಿದ್ದರು ಎಂಬುದನ್ನು ಊರ್ಮಿಳಾ ಅವರು ಹೇಳಿದ್ದಾರೆ.
ಊರ್ಮಿಳಾ ಅವರು ಹಂಚಿಕೊಂಡಿರುವ ಕೆಲವು ಆಡಿಯೋ ಕ್ಲಿಪ್‌ಗಳು ಈ ಆರೋಪಗಳ ತೀವ್ರತೆಯನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿವೆ. ಈ ಆರೋಪಗಳನ್ನು ಸಾಬೀತು ಪಡಿಸಲು, ಊರ್ಮಿಳಾ ಸನಾವರ್ ಹಾಗೂ ಮಾಜಿ ಶಾಸಕ ಸುರೇಶ್ ರಾಥೋಡ್ ಅವರು ನ್ಯಾಯಾಲಯದ ಮುಂದೆ ನಾರ್ಕೋ ಅನಾಲಿಸಿಸ್ (ಮಂಪರು ಪರೀಕ್ಷೆ)ಗೆ ಸಮ್ಮತಿ ಸೂಚಿಸಿದ್ದಾರೆ. ಇದು ಪ್ರಕರಣದ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಆಘಾತಕಾರಿ ಬೆಳವಣಿಗೆಯ ಕುರಿತು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಲಾವಣ್ಯ ಬಲ್ಲಾಳ್, ಬಿಜೆಪಿಯ ಮೌನವನ್ನು ಕಟುವಾಗಿ ಪ್ರಶ್ನಿಸಿದ್ದಾರೆ. “ಒಂದು ವೇಳೆ ಈ ಆರೋಪಗಳು ಸುಳ್ಳು ಸುದ್ದಿಯಾಗಿದ್ದರೆ, ಬಿಜೆಪಿ ನಾಯಕರು ಇಷ್ಟೊತ್ತಿಗೆ ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು; ಆದರೆ ಅವರ ಮೌನವೇ ಈ ಆರೋಪಗಳ ಸುತ್ತ ಅನುಮಾನಗಳನ್ನು ಹುಟ್ಟುಹಾಕುತ್ತಿದೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಕೇಳಿದ್ದಾರೆ.
ನೇರವಾಗಿ ಬಿ.ಎಲ್. ಸಂತೋಷ್ ಅವರನ್ನು ಗುರಿಯಾಗಿಸಿ ಪ್ರಶ್ನಿಸಿರುವ ಲಾವಣ್ಯ ಬಲ್ಲಾಳ್, “ನೀವು ಈ ಕೂಡಲೇ ಸ್ಪಷ್ಟನೆ ನೀಡಬೇಕು, ನಿಮ್ಮ ಮೇಲೆ ಲೈಂಗಿಕ ದೌರ್ಜನ್ಯಕೋರ (sexual predator) ಎಂಬ ಅತ್ಯಂತ ಗಂಭೀರವಾದ ಆರೋಪಗಳು ಕೇಳಿಬರುತ್ತಿವೆ” ಎಂದು ಒತ್ತಾಯಿಸಿದ್ದಾರೆ. ಇಂತಹ ದೊಡ್ಡ ಆರೋಪಗಳು ಬಂದಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸ್ಪಷ್ಟನೆ ನೀಡದಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಇದು ಜಾಲತಾಣಗಳಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಸಿಕ್ಕಿಂ ರಾಜ್ಯಪಾಲ ಹಾಗೂ ಆರ್‌ಎಸ್‌ಎಸ್ ಪ್ರಚಾರಕರ ಹೆಸರು ಕೇಳಿಬಂದಿದ್ದರೂ ಬಿಜೆಪಿ ವರಿಷ್ಠರು ತುಟಿ ಬಿಚ್ಚದಿರುವ ಕಾರಣವೇನು ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ರಾಜಕೀಯ ವಲಯದಲ್ಲೂ ಇದು ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ ಹಾಗೂ ವಿರೋಧ ಪಕ್ಷಗಳಿಗೆ ಅಸ್ತ್ರ ಒದಗಿಸಿದೆ.
ಈ ಗಂಭೀರ ಆರೋಪಗಳ ಹಿಂದಿನ ಸತ್ಯಾಸತ್ಯತೆ ಏನು? ಅಂಕಿತಾ ಭಂಡಾರಿ ಪ್ರಕರಣಕ್ಕೂ ಹಾಗೂ ಈ ನಾಯಕರಿಗೂ ಇರುವ ನೈಜ ನಂಟೇನು? ಇಷ್ಟೆಲ್ಲಾ ಆರೋಪಗಳು ಕೇಳಿಬಂದರೂ ಬಿ.ಎಲ್. ಸಂತೋಷ್ ಅವರು ಮೌನ ಮುರಿದು ಉತ್ತರಿಸುವರೇ? ಈ ಎಲ್ಲ ಪ್ರಶ್ನೆಗಳಿಗೆ ತನಿಖೆ ಹಾಗೂ ನಾಯಕರ ಸ್ಪಷ್ಟನೆಯೇ ಉತ್ತರ ನೀಡಬೇಕಿದೆ ನೆಟ್ಟಿಗರ ಆಗ್ರಹವಾಗಿದೆ.





