ದೀಪಾವಳಿ, ಧನತ್ರಯೋದಶಿ ಹಬ್ಬಗಳ ಸೀಸನ್‌ನಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರಮಾಣದ ಶೃಂಗಾರ ಮತ್ತು ಖರೀದಿ ಚಟುವಟಿಕೆಗಳು ನಡೆಯುತ್ತಿರುವ ಬೆನ್ನಲ್ಲೇ, ನವೆಂಬರ್ 1ರಂದು ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ‘ಇಂಡಿಯಾ’ ಒಕ್ಕೂಟ ಆಯೋಜಿಸಿರುವ ಬೃಹತ್ ರ‍್ಯಾಲಿಯನ್ನು ಮುಂದೂಡುವಂತೆ ವ್ಯಾಪಾರಿಗಳ ಒಕ್ಕೂಟ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ಸಮಾವೇಶ ನಡೆದರೆ ಹಬ್ಬದ ಜನಸಂದಣಿಯಲ್ಲಿ ಸುಮಾರು ₹10,000 ಕೋಟಿ ರೂಪಾಯಿ ವ್ಯಾಪಾರ ನಷ್ಟವಾಗುವ ಆತಂಕವಿದೆ ಎಂದು ದೆಹಲಿಯ ಪ್ರಮುಖ ವರ್ತಕರ ಸಂಘಟನೆಯಾದ ದಿ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಎಚ್ಚರಿಸಿದೆ.
ಇದನ್ನೂ ಓದಿ: ದೀಪಾವಳಿ ಬೋನಸ್ ಕೊಟ್ಟಿಲ್ಲವೆಂದು ಟೋಲ್‌ನ ಎಲ್ಲ ಗೇಟ್‌ಗಳನ್ನು ತೆರೆದ ಸಿಬ್ಬಂದಿ
ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ರಾಹುಲ್ ಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ, ದೀಪಾವಳಿ ಮತ್ತು ಧನತ್ರಯೋದಶಿ ಹಬ್ಬದ ಸಂದರ್ಭದಲ್ಲಿ ನವದೆಹಲಿ, ಹಳೆಯ ದೆಹಲಿ ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ಭಾರಿ ಪ್ರಮಾಣದ ಜನದಟ್ಟಣೆ ಇರುತ್ತದೆ ಎಂದು ತಿಳಿಸಿದ್ದಾರೆ.
ಹಾಗೆಯೇ ರಾಮ್‌ಲೀಲಾ ಮೈದಾನವು ನವದೆಹಲಿ ಮತ್ತು ಹಳೆಯ ದೆಹಲಿ ರೈಲು ನಿಲ್ದಾಣಗಳಿಗೆ ಹಾಗೂ ಪ್ರಮುಖ ಮಾರುಕಟ್ಟೆ ಪ್ರದೇಶಗಳಿಗೆ ಹತ್ತಿರದಲ್ಲಿದೆ. ರ‍್ಯಾಲಿಯ ಕಾರಣದಿಂದಾಗಿ ಸಂಚಾರ ಮಾರ್ಗ ಬದಲಾವಣೆ, ಮೆಟ್ರೋ ನಿಲ್ದಾಣಗಳ ನಿಯಂತ್ರಣ ಮತ್ತು ಬ್ಯಾರಿಕೇಡ್‌ಗಳ ಅಳವಡಿಕೆಯಿಂದ ಗ್ರಾಹಕರು ಮಾರುಕಟ್ಟೆಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಧನತ್ರಯೋದಶಿ ಮತ್ತು ದೀಪಾವಳಿ ದಿನಗಳಲ್ಲಿ ದೆಹಲಿಯಲ್ಲಿ ಚಿನ್ನ-ಬೆಳ್ಳಿ, ಎಲೆಕ್ಟ್ರಾನಿಕ್ಸ್, ಬಟ್ಟೆ, ಪಾತ್ರೆ, ಡ್ರೈಫ್ರೂಟ್ಸ್ ಹಾಗೂ ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಅಕ್ಟೋಬರ್ ತಿಂಗಳಲ್ಲಿ ಈಗಾಗಲೇ ನಡೆದಿರುವ ವಿವಿಧ ಪ್ರತಿಭಟನೆಗಳಿಂದಾಗಿ ₹3,000 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದೇವೆ. ಹೀಗಿರುವಾಗ ನವೆಂಬರ್ 1 ರ ರ‍್ಯಾಲಿಯು ದೆಹಲಿಯ ವ್ಯಾಪಾರದ ಬೆನ್ನೆಲುಬನ್ನೇ ಮುರಿಯಲಿದ್ದು, ಸುಮಾರು ₹10,000 ಕೋಟಿಯಷ್ಟು ವ್ಯಾಪಾರ ನಷ್ಟವಾಗಬಹುದು” ಎಂದು ಸಿಟಿಐ ಕಳವಳ ವ್ಯಕ್ತಪಡಿಸಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು, ನೌಕರರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ, ಹಬ್ಬದ ಸೀಸನ್ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಯೋಜಿತ ‘ಇಂಡಿಯಾ’ ಒಕ್ಕೂಟದ ಸಮಾವೇಶವನ್ನು ನವೆಂಬರ್ 10ರ ನಂತರ ಆಯೋಜಿಸುವಂತೆ ಸಿಟಿಐ ರಾಹುಲ್ ಗಾಂಧಿ ಅವರಲ್ಲಿ ವಿನಂತಿಸಿದೆ.






