ಕಚೇರಿಗೆ ಬೆಂಕಿ ಬಿದ್ದ ನಂತರ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿರುವ ನಿಗದಿತ ಸಾಕ್ಷಿಗಳ ವಿಚಾರಣೆಯ ಮೇಲೆ ಪರಿಣಾಮ ಬೀರುವ, ಮೆಹುಲ್ ಚೋಕ್ಸಿ, ನೀರವ್ ಮೋದಿ, ಅನಿಲ್ ದೇಶ್‌ಮುಖ್, ಛಗನ್ ಭುಜ್‌ಬಲ್ ಬಚಾವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮುಂಬೈನಲ್ಲಿ ಭಾನುವಾರ(ಏ.27)ರಂದು ಮಧ್ಯರಾತ್ರಿ ದಕ್ಷಿಣ ಮುಂಬೈನಲ್ಲಿರುವ ಇ.ಡಿ ಕಚೇರಿಗೆ ಬೆಂಕಿ ಹೊತ್ತಿಕೊಂಡಿತ್ತು. 10 ಗಂಟೆಗಳಿಗೂ ಹೆಚ್ಚು ಕಾಲ ಬೆಂಕಿ ಉರಿದಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಆದರೆ ಮೆಹುಲ್ ಚೋಕ್ಸಿ, ನೀರವ್ ಮೋದಿ, ಅನಿಲ್ ದೇಶ್‌ಮುಖ್, ಛಗನ್ ಭುಜ್‌ಬಲ್ ಅವರ ಹಲವು ಭ್ರಷ್ಟಾಚಾರ ಪ್ರಕರಣಗಳ ದಾಖಲೆಗಳು ಹಾಗೂ ಕಾಗದ ಪತ್ರಗಳು ಸುಟ್ಟುಹೋಗಿದೆ ಎಂದು ಹೇಳಲಾಗುತ್ತಿದೆ.
ಮಾಧ್ಯಮಗಳ ವರದಿಯ ಪ್ರಕಾರ ಯಾವ ಮಟ್ಟದ ಹಾನಿಯುಂಟಾಗಿದೆ ಎಂಬುದನ್ನು ಇ.ಡಿ ದಾಖಲಿಸಲಿದೆ ಎಂದು ಹೇಳಲಾಗುತ್ತಿದೆ. ಈ ಕಚೇರಿಯಲ್ಲಿ ಹಲವು ಭ್ರಷ್ಟಾಚಾರ ಪ್ರಕರಣಗಳ ಭೌತಿಕ ಹಾಗೂ ಡಿಜಿಟಲ್ ತನಿಖೆಯ ದಾಖಲೆಗಳನ್ನು ಇಡಲಾಗಿತ್ತು. ತನಿಖೆ ನಡೆಯುತ್ತಿದ್ದ ದಾಖಲೆಗಳು ಸುಟ್ಟುಹೋಗಿರಬಹುದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮೂಲಗಳ ಪ್ರಕಾರ ಕಂಪ್ಯೂಟರ್‌ಗಳು ಹಾಗೂ ದಾಖಲೆಗಳನ್ನು ಒಳಗೊಂಡ ತನಿಖೆಗೆ ಸಂಬಂಧಪಟ್ಟ ಸ್ವತ್ತುಗಳನ್ನು ಕಚೇರಿಯಲ್ಲಿ ಇಡಲಾಗಿತ್ತು ಎನ್ನಲಾಗಿದೆ.
ಹಾಗೆಯೇ ಬಹುತೇಕ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿತ್ತು ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯವು ಅವುಗಳನ್ನು ಪುನಃ ಮರಳಿಪಡೆಯುವ ಸಾಧ್ಯತೆಯಿದೆ ಎಂದೂ ಕೂಡ ಹೇಳಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಹ್ಯ ಭಯೋತ್ಪಾದನೆಗೆ ಆಂತರಿಕ ಮುಸ್ಲಿಂ ವಿರೋಧ ಉತ್ತರವಲ್ಲ
ಮೂಲಗಳ ಪ್ರಕಾರ ಪ್ರಕರಣಗಳ ತನಿಖೆಯ ದಾಖಲೆಗಳನ್ನು ಇ.ಡಿ ಆರೋಪಪಟ್ಟಿಯ ಮೂಲಕ ಕೋರ್ಟ್‌ಗೆ ಸಲ್ಲಿಸಿದ್ದು, ಅವುಗಳ ಪ್ರತಿಗಳನ್ನು ತನ್ನಲ್ಲಿ ಇಟ್ಟುಕೊಂಡಿತ್ತು. ಆದರೆ ಕಚೇರಿಗೆ ಬೆಂಕಿ ಬಿದ್ದ ನಂತರ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿರುವ ನಿಗದಿತ ಸಾಕ್ಷಿಗಳ ವಿಚಾರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕೈಸರ್ ಹಿಂದ್ ಪ್ರದೇಶದಲ್ಲಿರುವ ನಾಲ್ಕು ಮಹಡಿಗಳ ಪುರಾತನ ಕಟ್ಟಡದಲ್ಲಿ ಇ.ಡಿ ನಾಲ್ಕನೇ ಹಾಗೂ ಮೊದಲ ಮಹಡಿಯಲ್ಲಿ ಕಚೇರಿ ಹೊಂದಿದೆ. ನಾಲ್ಕನೇ ಮಹಡಿಯಲ್ಲಿರುವ ಹೆಚ್ಚುವರಿ ನಿರ್ದೇಶಕರ ಕಚೇರಿ ಹಾಗೂ ತನಿಖಾ ಘಟಕಗಳಿಗೆ ಬೆಂಕಿ ಬಿದ್ದಿದ್ದು, ಘಟನೆ ನಂತರ ಈ ಮಹಡಿಯನ್ನು ಸದ್ಯಕ್ಕೆ ಮುಚ್ಚಲಾಗಿದೆ. ಅಗ್ನಿಶಾಮಕ ದಳದ ವರದಿಯ ಪ್ರಕಾರ ಕಚೇರಿಗೆ ಮಧ್ಯರಾತ್ರಿ 2.30ರ ಸಮಯದಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಆ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮಾತ್ರ ಸ್ಥಳದಲ್ಲಿದ್ದರು. ಯಾರಿಗೂ ಗಾಯಗಳಾಗಿಲ್ಲ.
ಹೆಚ್ಚು ಹೊಗೆ ಆವರಿಸಿದ ಕಾರಣ ಅಗ್ನಿ ಶಾಮಕ ಸಿಬ್ಬಂದಿ ಕೂಡ ಘಟನೆ ನಡೆದ ಪ್ರಮುಖ ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹಳೆಯ ಕಟ್ಟಡವಾದ ಕಾರಣ ಕೇವಲ ಒಂದು ಮೆಟ್ಟಿಲು ಪ್ರದೇಶ ಮಾತ್ರ ಇದೆ. ಅಗ್ನಿ ಶಾಮಕ ಸಿಬ್ಬಂದಿ ಪ್ರಕಾರ ದುರಂತದಲ್ಲಿ ಅಪಾರ ಪ್ರಮಾಣದ ಕಾಗದ ಪತ್ರಗಳು, ದಾಖಲೆಗಳು ಪೀಠೋಪಕರಣಗಳು ಬೆಂಕಿಯಲ್ಲಿ ನಾಶವಾಗಿವೆ ಎನ್ನಲಾಗುತ್ತಿದೆ. ಭಾನುವಾರ ಮಧ್ಯಾಹ್ನದ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ತಹಬದಿಗೆ ತರಲಾಯಿತು.