- ಮುಂಗಾರು ದುರ್ಬಲದ ಪರಿಣಾಮ ಜುಲೈ 6ರವರೆಗೆ ಮಳೆಯಲ್ಲಿ ವ್ಯತ್ಯಯ
- ಜೂನ್ 1ರ ಬದಲಿಗೆ ಜೂನ್ 8ಕ್ಕೆ ಕೇರಳಕ್ಕೆ ಆಗಮಿಸಲಿರುವ ನೈರುತ್ಯ ಮುಂಗಾರು
ಮುಂದಿನ ನಾಲ್ಕು ವಾರಗಳಲ್ಲಿ ಭಾರತದಲ್ಲಿ ಮುಂಗಾರು ದುರ್ಬಲ ಸ್ಥಿತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ವೆದರ್ ಹೇಳಿರುವುದಾಗಿ ಮಂಗಳವಾರ (ಜೂನ್ 13) ವರದಿಯಾಗಿದೆ.
ಅನಿಯಮಿತವಾಗಿ ಸುರಿಯುವ ಮಳೆಯಿಂದ ಕೃಷಿ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
“ಜುಲೈ 6ರವರೆಗೆ ಮುಂದಿನ ನಾಲ್ಕು ವಾರಗಳ ಕಾಲ ನಿರಾಶಾದಾಯಕ ವಾತಾವರಣ ಇರಲಿದೆ ಎಂದು ವಿಸ್ತೃತ ಶ್ರೇಣಿಯ ಮುನ್ಸೂಚನಾ ವ್ಯವಸ್ಥೆ (ಇಆರ್‌ಪಿಎಸ್) ಅಂದಾಜು ತೋರುತ್ತಿದೆ. ಕೃಷಿ ಭೂಮಿಯು ಬಿರುಕುಬಿಟ್ಟು ಒಣಗಿಹೋಗುತ್ತಿರುವುದು ಗೋಚರಿಸುತ್ತಿದ್ದು ಬಿತ್ತನೆಯ ನಿರ್ಣಾಯಕ ಮತ್ತು ಕೃಷಿ ಭೂಮಿಯನ್ನು ಸಿದ್ಧಗೊಳಿಸುವ ಸಮಯದಲ್ಲಿ ಮುಂಗಾರು ದುರ್ಬಲ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ” ಎಂದು ಹವಾಮಾನ ಸಂಸ್ಥೆ ಸೋಮವಾರ (ಜೂನ್ 12) ಪ್ರಕಟಣೆಯೊಂದರಲ್ಲಿ ಹೇಳಿದೆ.
ಮುಂಗಾರು ದುರ್ಬಲ ವಲಯಕ್ಕೆ ಬರುವ ಭಾರತದ ಮಧ್ಯ ಹಾಗೂ ಪಶ್ಚಿಮ ಭಾಗಗಳಲ್ಲಿ ಋತುವಿನ ಆರಂಭದಲ್ಲಿ ಅಸಮರ್ಪಕ ಮಳೆಯಿಂದ ಉಂಟಾಗುವ ಒಣ ಭೂಮಿಯನ್ನು ನಿಭಾಯಿಸುವಲ್ಲಿ ಉಂಟಾಗುವ ಸವಾಲುಗಳನ್ನು ಎದುರಿಸಬಹುದು” ಎಂದು ಸ್ಕೈಮೆಟ್ ಸಂಸ್ಥೆ ಹೇಳಿದೆ.
ನೈರುತ್ಯ ಮುಂಗಾರು ನಿಗದಿತ ಜೂನ್ 1ರ ದಿನಾಂಕದ ಬದಲಿಗೆ ಒಂದು ವಾರ ತಡವಾಗಿ ಜೂನ್ 8ಕ್ಕೆ ಕೇರಳ ಪ್ರವೇಶಿಸಲಿದೆ.
ಅರೇಬಿಯನ್ ಸಮುದ್ರದಲ್ಲಿ ಉಂಟಾಗಿರುವ ಬಿಪೊರ್‌ಜಾಯ್ ಚಂಡಮಾರುತ ಮೊದಲು ಕೇರಳಕ್ಕೆ ಮುಂಗಾರು ಪ್ರವೇಶವನ್ನು ವಿಳಂಬಗೊಳಿಸಿತು. ಈಗ ಮಳೆ ಬೀಳುವ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ.
ಮುಂಗಾರು ದುರ್ಬಲ ಪರಿಣಾಮ ದ್ವೀಪದ ಆಂತರಿಕ ಪ್ರದೇಶಗಳಿಗೆ ಮಳೆ ಪ್ರವೇಶಕ್ಕೆ ತಡೆ ಉಂಟಾಗಿದೆ ಎಂದು ಹವಾಮಾನ ಸಂಸ್ಥೆ ಹೇಳಿದೆ.
ಜೂನ್ 15ರೊಳಗೆ ಮುಂಗಾರು ಮಳೆಯು ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣ, ಛತ್ತೀಸ್‌ಘಡ, ಜಾರ್ಖಂಡ್ ಹಾಗೂ ಬಿಹಾರದ ಭಾಗಶಃ ಪ್ರದೇಶಗಳಲ್ಲಿ ಹಾದು ಹೋಗುತ್ತದೆ.
ಆದರೆ ಈ ಬಾರಿ ಮುಂಗಾರು ಈ ಪ್ರದೇಶಗಳಲ್ಲಿ ನೆಲೆಸಲು ಇನ್ನೂ ಹರಸಾಹಸ ಪಡುತ್ತಿದೆ ಎಂದು ಸ್ಕೈಮೆಟ್ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಹರಿಯಾಣ | ಸೂರ್ಯಕಾಂತಿ ಬೆಳೆಗೆ ಎಂಎಸ್‌ಪಿ ನೀಡಲು ಆಗ್ರಹಿಸಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ
ಪ್ರಸ್ತುತ ಮುಂಗಾರು ಈಶಾನ್ಯ ಹಾಗೂ ಪಶ್ಚಿಮ ಕರಾವಳಿಗೆ ಸೀಮಿತವಾಗಿದೆ.
ಹವಾಮಾನ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗಿದೆ. ಇದರಿಂದ ಮಳೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಂಸ್ಥೆ ಹೇಳಿದೆ.