ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಮುಂದುವರಿದಿವೆ. ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿ ಸಲ್ಮಾನ್‌ಗೆ ಬೆದರಿಕೆ ಸಂದೇಶ ಬಂದಿದೆ. ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಇದು ನಡೆದಿದೆ.
ಬೆದರಿಕೆ ಹಾಕಿರುವ ವ್ಯಕ್ತಿ ಯಾರು ಎಂಬುದು ಸದ್ಯಕ್ಕೆ ಪತ್ತೆಯಾಗಿಲ್ಲ. ಗುರುವಾರ ತಡರಾತ್ರಿ ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಬೆದರಿಕೆ ಸಂದೇಶ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈನ ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಲಾಗಿತ್ತು. ಆ ಬೆದರಿಕೆಯಲ್ಲಿ ಜಿಂಕೆ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೇವಸ್ಥಾನಕ್ಕೆ ತೆರಳಿ ಕ್ಷಮೆ ಕೇಳುವಂತೆ ಹಾಗೂ 5 ಕೋಟಿ ರೂ. ಕೊಡುವಂತೆ ಕೇಳಲಾಗಿತ್ತು.
ಎರಡು ದಿನಗಳ ಹಿಂದಷ್ಟೇ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆಯೊಡ್ಡಿದ್ದ ಆರೋಪದಡಿ ಬಿಖಾ ರಾಮ್ ಅಲಿಯಾಸ್ ವಿಕ್ರಮ್ (32) ಎಂಬುವವರನ್ನು ಹಾವೇರಿ ಜಿಲ್ಲಾ ಪೊಲೀಸರು ಬಂಧಿಸಿ, ಮುಂಬೈನ ಭಯೋತ್ಪಾದನಾ ನಿಗ್ರಹ ಪಡೆಯ ವಶಕ್ಕೆ ಒಪ್ಪಿಸಿದ್ದಾರೆ.
1998ರಲ್ಲಿ ರಾಜಸ್ಥಾನದಲ್ಲಿ ಸಲ್ಮಾನ್ ಖಾನ್ ಅವರು ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಜೋಧ್ ಪುರದಲ್ಲಿ ಬೇಟೆಗೆ ತೆರಳಿದ್ದರು. ಅಂದು ರಾತ್ರಿ ಸಲ್ಮಾನ್ ಕೃಷ್ಣಮೃಗ ಬೇಟೆಯಾಡಿದ್ದರು ಎನ್ನಲಾಗಿದೆ. ಈ ಕಪ್ಪು ಜಿಂಕೆಯನ್ನು ಬಿಷ್ಣೋಯ್ ಸಮುದಾಯದಲ್ಲಿ ಬಹಳ ಪೂಜ್ಯವೆಂದು ಪರಿಗಣಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು ಕೇಳಿ ಬಂದ ತಕ್ಷಣ ಬಿಷ್ಣೋಯ್ ಸಮುದಾಯದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. 2018 ರಲ್ಲಿ ಜೋಧ್‌ಪುರ ನ್ಯಾಯಾಲಯವು ಸಲ್ಮಾನ್ ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಎರಡು ದಿನಗಳ ನಂತರ ಸಲ್ಮಾನ್ ಖಾನ್ ಜಾಮೀನಿನ ಮೇಲೆ ಹೊರಬಂದರು.
ಇದರಿಂದ ಕೋಪಗೊಂಡ ರೌಡಿ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅಂದಿನಿಂದ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಅವರ ಪರಮ ಶತ್ರುವಾಗಿಯೇ ಉಳಿದಿದ್ದಾನೆ. ಇತ್ತೀಚಿನ ದಿನಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್‌ಗೆ ಹಲವು ಬಾರಿ ಕೊಲೆ ಬೆದರಿಕೆಗಳು ಬಂದಿವೆ.