ಶೂಟಿಂಗ್ ಮುಗಿಸಿ ಮನೆಗೆ ತೆರಳುವಾಗ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಅವರಿಗೆ ಹೃದಯಾಘಾತವಾಗಿದೆ. ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಶೇಯಸ್ ಅವರು ‘ವೆಲ್‌ಕಮ್ ಟು ದಿ ಜಂಗಲ್-3’ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ಬಳಿಕ ಮನೆಗೆ ತೆರಳುವಾಗ ಮಾರ್ಗ ಮಧ್ಯೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಮುಂಬೈನ ಅಂಧೇರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯಲ್ಲಿ ಶ್ರೇಯಸ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
‘ವೆಲ್‌ಕಂ ಟು ದಿ ಜಂಗಲ್-3’ ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಎರಡನೇ ಭಾಗವು 2015 ರಲ್ಲಿ ಬಿಡುಗಡೆಯಾಗಿತ್ತು. ಆ ಚಿತ್ರಕ್ಕೆ ‘ವೆಲ್‌ಕಮ್ ಬ್ಯಾಕ್’ ಎಂದು ಹೆಸರಿಸಲಾಗಿತ್ತು.
ಶ್ರೇಯಸ್ ತಲ್ಪಡೆ ಅವರು 2002ರಲ್ಲಿ ‘ಆಂಖೇ’ ಸಿನಿಮಾದ ಮೂಲಕ ಹಿಂದಿ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ್ದರು. ಅವರು ‘ಓಂ ಶಾಂತಿ ಓಂ, ಹೌಸ್ಫುಲ್ 2, ಗೋಲ್ಮಾಲ್ ರಿಟರ್ನ್ಸ್, ಗೋಲ್ಮಾಲ್ 3’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.