ದೆಹಲಿಯ ಸುಮಾರು 40 ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಹಾಕಲಾಗಿದ್ದು ಈ ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿ 30,000 ಯುಎಸ್ ಡಾಲರ್ ಬೇಡಿಕೆ ಮುಂದಿಟ್ಟಿದ್ದಾನೆ.
ಒಂದೇ ಇಮೇಲ್‌ನಲ್ಲಿ ಬಹುತೇಕ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಬೆನ್ನಲ್ಲೇ ಸುರಕ್ಷಿತ ದೃಷ್ಟಿಯಿಂದ ಹಲವು ಶಾಲೆಗಳಿಗೆ ಶಾಲಾಡಳಿತವು ರಜೆ ಘೋಷಿಸಿದ್ದು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದೆ.
ದೆಹಲಿಯ ಪ್ರಸಿದ್ಧ ಶಾಲೆಗಳಾದ ಡಿಪಿಎಸ್ ಆರ್‌ಕೆ ಪುರಮ್, ಪಶ್ಚಿಮ ವಿಹಾರದ ಜಿಡಿ ಗೋಯೆಂಕಾ, ಚಾಣಕ್ಯಪುರಿಯ ದಿ ಬ್ರಿಟಿಷ್ ಸ್ಕೂಲ್, ಅರಬಿಂದೋ ಮಾರ್ಗದ ದ ಮದರ್ಸ್ ಇಂಟರ್‌ನ್ಯಾಶನಲ್, ಮಂಡಿ ಹೌಸ್‌ನ ಮಾಡರ್ನ್ ಸ್ಕೂಲ್, ಡಿಪಿಎಸ್ ವಸಂತ್ ಕುಂಜ್, ಸಫ್‌ದರ್‌ಜಂಗ್‌ನ ದೆಹಲಿ ಪೊಲೀಸ್ ಪಬ್ಲಿಕ್ ಸ್ಕೂಲ್, ಕೈಲಾಶ್ ಮತ್ತು ಸಾಲ್ವಾನ್‌ನ ಡಿಪಿಎಸ್ ಈಸ್ಟ್ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಬಂದಿದೆ.
ಇದನ್ನು ಓದಿದ್ದೀರಾ? ತಾಜ್ ಮಹಲ್‌ಗೆ ಹುಸಿ ಬಾಂಬ್ ಬೆದರಿಕೆ; ತೀವ್ರ ಭದ್ರತಾ ತಪಾಸಣೆ
ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಮೊದಲು ಡಿಪಿಎಸ್ ಆರ್‌ಕೆ ಪುರಮ್ ಮತ್ತು ಪಶ್ಚಿಮ ವಿಹಾರದ ಜಿಡಿ ಗೋಯೆಂಕಾ ಶಾಲೆಯಿಂದ ಮುಂಜಾನೆ ಕರೆ ಬಂದಿದೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕದಳ, ಸ್ಥಳೀಯ ಪೊಲೀಸರು, ಶ್ವಾನ ದಳವು ಈ ಎರಡು ಶಾಲೆಗಳಿಗೆ ತಲುಪಿ ಶೋಧ ನಡೆಸಿದೆ.
ಯಾವುದೇ ಅನುಮಾಸ್ಪದ ವಸ್ತುಗಳು ಕಂಡುಬಂದಿಲ್ಲ. scottielanza@gmail.com ಎಂಬ ಐಡಿಯಿಂದ ಇಮೇಲ್ ಬಂದಿದೆ ಎನ್ನಲಾಗಿದೆ.
“ನಾನು ಹಲವು ಕಟ್ಟಡಗಳಲ್ಲಿ ಬಾಂಬ್ ಇರಿಸಿದ್ದೇನೆ. ಬಾಂಬ್ ಸಣ್ಣದಾಗಿದ್ದು ಅದನ್ನು ಬಚ್ಚಿಡಲಾಗಿದೆ. ಈ ಸ್ಫೋಟವು ಕಟ್ಟಡಕ್ಕೆ ಹೆಚ್ಚಿನ ಹಾನಿ ಉಂಟು ಮಾಡದು. ಆದರೆ ಬಾಂಬ್ ಸ್ಫೋಟವಾದರೆ ಹಲವು ಮಂದಿಗೆ ಗಾಯಗಳಾಗಲಿವೆ” ಎಂದು ಇಮೇಲ್‌ನಲ್ಲಿ ಬರೆಯಲಾಗಿದೆ.
ಇದನ್ನು ಓದಿದ್ದೀರಾ? ಬಾಂಬ್ ಬೆದರಿಕೆ | ಆರೋಪಿ ಜಗದೀಶ್ ಶರಣು
“ನನಗೆ 30,000 ಯುಎಸ್ ಡಾಲರ್ ಸಿಗದಿದ್ದರೆ ನೀವೆಲ್ಲರೂ ಕೈಕಾಲು ಕಳೆದುಕೊಂಡು ಬಳಲುವಂತಾಗುತ್ತದೆ. =E2=80=9CKNR=E2=80=9D ಗ್ರೂಪ್ ಈ ಕೃತ್ಯದ ಹಿಂದಿದೆ” ಎಂದು ಕೂಡಾ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಮೇ ತಿಂಗಳಿನಲ್ಲಿ ಇದೇ ರೀತಿ ಸುಮಾರು 200 ಶಾಲೆಗಳು, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಆರೋಪಿಗಳು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಬಳಸಿಕೊಂಡು ಇಮೇಲ್ ಮಾಡಿದ್ದು ಈ ಪ್ರಕರಣದಲ್ಲಿ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ.
