ಹನ್ನೊಂದು ವರ್ಷದ ಬಾಲೆಯ ಮೇಲೆ ಲೈಂಗಿಕ ಹಲ್ಲೆಗಳನ್ನು ನಡೆಸಿ ಕಿರುಕುಳ ನೀಡಿದ ಮಾಜಿ ಸೇನಾಧಿಕಾರಿಗೆ ‘ಪೋಕ್ಸೋ’ ಕಾಯಿದೆಯಡಿ ವಿಧಿಸಲಾಗಿದ್ದ ಐದು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ಬಾಂಬೆ ಹೈಕೋರ್ಟು ಎತ್ತಿ ಹಿಡಿದಿದೆ.
ಹಲ್ಲೆ ಮತ್ತು ಕಿರುಕುಳಕ್ಕೆ ಗುರಿಯಾಗಿರುವ ಅಪ್ರಾಪ್ತಳ ಹೇಳಿಕೆ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹುದಾಗಿದೆ. ಕಾರಾಗಾರ ಶಿಕ್ಷೆಯನ್ನು ಪ್ರಶ್ನಿಸಿರುವ ಮೇಲ್ಮನವಿದಾರನ ‘ದುರುಳ ಸ್ಪರ್ಶ’ವನ್ನು (ಬ್ಯಾಡ್ ಟಚ್) ಗುರುತು ಹಿಡಿದಿರುವ ಆಕೆಯ ಸಹಜ ಪ್ರವೃತ್ತಿ ಅಥವಾ ಅಂತರ್ಗತ ಭಾವನೆಯನ್ನು ನಂಬಬಹುದು ಎಂದು ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರನ್ನು ಒಳಗೊಂಡ ನ್ಯಾಯಪೀಠ ಇತ್ತೀಚೆಗೆ ಹೇಳಿದೆ.
‘ಜನರಲ್ ಕೋರ್ಟ್ ಮಾರ್ಶಲ್’ 2021ರಲ್ಲಿ ನೀಡಿದ್ದ ಕನಿಷ್ಠ ಐದು ವರ್ಷಗಳ ಶಿಕ್ಷೆಯನ್ನು ಮುಂಬಯಿಯ ಸಶಸ್ತ್ರ ಸೇನಾ ನ್ಯಾಯಾಧಿಕರಣ (Armed Forces Tribunal) ಎತ್ತಿ ಹಿಡಿದಿತ್ತು. ಆಪಾದಿತನು ಈ ತೀರ್ಪನ್ನು ಬಾಂಬೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದ. 2024ರಲ್ಲಿ ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಈ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು.
2020ರ ಫೆಬ್ರವರಿ ಒಂದರಂದು ಪುಣೆಯಲ್ಲಿ ಪೋಸ್ಟಿಂಗ್ ನಂತರ ಈತ ತನ್ನ ಅಧೀನದಲ್ಲಿರುವ ಹವಾಲ್ದಾರನನ್ನು ತನ್ನ ಇಬ್ಬರು ಮಕ್ಕಳನ್ನು ಕರೆತರುವಂತೆ ಸೂಚಿಸಿದ. ಅವರಿಗೆ ಹಸ್ತಸಾಮುದ್ರಿಕೆಯನ್ನು ಹೇಳಿಕೊಡುವುದಾಗಿ ಹೇಳಿದ್ದ. ತಂದೆ ಮತ್ತು ಮಗನನ್ನು ಪೆನ್ ತರುವಂತೆ ಕಳಿಸಿದ. ಎರಡು ನಿಮಿಷಗಳ ನಂತರ ಹವಾಲ್ದಾರ್ ಹಿಂತಿರುಗಿದಾಗ ಮಗಳು ಅಳುತ್ತಿದ್ದುದು ಕಂಡುಬಂತು.
ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದೂ, ಬಾಲಕಿಯಿಂದ ತಂದೆ-ತಾತನ ಮಮತೆಯ ಭಾವನೆಯಲ್ಲಿ ಕೇವಲ ಒಂದು ಮುತ್ತನ್ನು ಕೇಳಿದ್ದಾಗಿಯೂ ಲೆಫ್ಟಿನೆಂಟ್ ಕರ್ನಲ್ ಹೇಳಿದ್ದ.
ಮೊದಲ ಭೇಟಿಯಲ್ಲೇ ಬಾಲಕಿಯ ಕೈ ಹಿಡಿಯಲು ಕಾರಣವೇ ಇರಲಿಲ್ಲ. ಅನುಚಿತವಾಗಿ ಮುಟ್ಟಿ, ಮುತ್ತು ಕೇಳಿದ್ದೂ ಸರಿಯಲ್ಲ ಎಂದು ಹೈಕೋರ್ಟು ತನ್ನ ತೀರ್ಪಿನಲ್ಲಿ ಹೇಳಿದೆ.