2006ರ ಮಾಲೆಗಾಂವ್ ಸ್ಫೋಟ ಪ್ರಕರಣದ ನಾಲ್ವರು ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ. ಅವರ ವಿರುದ್ಧ ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಗೊಳಿಸಿದೆ.
ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರ ಪೀಠವು ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ನಾಲ್ವರು ಆರೋಪಿಗಳಾದ ರಾಜೇಂದ್ರ ಚೌಧರಿ, ಧನ್ ಸಿಂಗ್, ಮನೋಹರ್ ರಾಮ್ ಸಿಂಗ್ ನರ್ವಾರಿಯಾ ಮತ್ತು ಲೋಕೇಶ್ ಶರ್ಮಾ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿದೆ.
ಇದನ್ನು ಓದಿದ್ದೀರಾ? ಮಾಲೆಗಾಂವ್ ಸ್ಫೋಟ ಪ್ರಕರಣ | ಖುಲಾಸೆಗೊಂಡ ಆರೋಪಿಗೆ ಕರ್ನಲ್ ಹುದ್ದೆ ಹಾಗೂ ವ್ಯವಸ್ಥೆಯ ಅಣಕ
ಈ ನಾಲ್ವರ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಮತ್ತು ಕಠಿಣ ಕಾನೂನುಬಾಹಿರ (ಚಟುವಟಿಕೆಗಳು) ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದೂರು ದಾಖಲಾಗಿತ್ತು.
ಏನಿದು 2006ರ ಮಾಲೆಗಾಂವ್ ಸ್ಫೋಟ ಪ್ರಕರಣ?
2006ರ ಸೆಪ್ಟೆಂಬರ್ 8ರಂದು ಹಮೀದಿಯಾ ಮಸೀದಿ ಮತ್ತು ಬಡಾ ಕಬರಿಸ್ತಾನ್ ಬಳಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸೈಕಲ್‌ಗಳಲ್ಲಿ ಅಳವಡಿಸಲಾದ ಬಾಂಬ್‌ಗಳು ಸ್ಫೋಟಗೊಂಡವು. ಈ ದುರಂತದಲ್ಲಿ ಸುಮಾರು 37 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಆರಂಭದಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಈ ಬಗ್ಗೆ ತನಿಖೆ ನಡೆಸಿ, ನಿಷೇಧಿತ ಸಿಮಿ (SIMI) ಸಂಘಟನೆಗೆ ಸೇರಿದವರು ಎಂದು ಹೇಳಲಾದ 9 ಮುಸ್ಲಿಂ ಯುವಕರನ್ನು ಬಂಧಿಸಿತ್ತು. ಬಳಿಕ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿತು. ಈ ವೇಳೆ ಪ್ರಕರಣಕ್ಕೆ ದೊಡ್ಡ ತಿರುವು ಕಂಡುಬಂದಿತ್ತು.
2011ರಲ್ಲಿ ಸ್ವಾಮಿ ಅಸೀಮಾನಂದ ನೀಡಿದ ತಪ್ಪೊಪ್ಪಿಗೆಯ ಆಧಾರದ ಮೇಲೆ, ಸ್ಫೋಟದ ಹಿಂದೆ ಬಲಪಂಥೀಯ ಉಗ್ರಗಾಮಿಗಳ ಕೈವಾಡವಿರಬಹುದು ಎಂದು NIA ಶಂಕಿಸಿತು. ಬಲಪಂಥೀಯರದ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಈ ನಡುವೆ 2016ರಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುಂಬೈ ವಿಶೇಷ ನ್ಯಾಯಾಲಯವು ಆರಂಭದಲ್ಲಿ ಬಂಧಿತರಾಗಿದ್ದ ಎಲ್ಲ 9 ಮುಸ್ಲಿಂ ಆರೋಪಿಗಳನ್ನು ದೋಷಮುಕ್ತಗೊಳಿಸಿತು.
ಇದನ್ನು ಓದಿದ್ದೀರಾ? ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಸಿಂಗ್ ಠಾಕೂರ್, ಕರ್ನಲ್ ಪುರೋಹಿತ್ ಸೇರಿ ಎಲ್ಲ ಆರೋಪಿಗಳು ಖುಲಾಸೆ
ಈ ನಾಲ್ವರು ಆರೋಪಿಗಳು NIA ತಮ್ಮ ವಿರುದ್ಧ ಯಾವುದೇ ಪುರಾವೆಗಳನ್ನು ಸಲ್ಲಿಸಲು ವಿಫಲವಾಗಿದೆ ಎಂದು ಹೇಳಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ ಬಾಂಬೆ ಹೈಕೋರ್ಟ್ ದೋಷಮುಕ್ತಗೊಳಿಸಿದೆ. ವಿಶೇಷ ನ್ಯಾಯಾಲಯವು ಕಳೆದ ವರ್ಷ ಇವರ ವಿರುದ್ಧ ಹೊರಿಸಿದ್ದ ಆರೋಪಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ 19 ವರ್ಷಗಳ ನಂತರವೂ ಈ ಬಾಂಬ್ ಸ್ಫೋಟದ ನಿಜವಾದ ಅಪರಾಧಿಗಳು ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ.
ಇನ್ನು ಮಾಲೆಗಾಂವ್‌ನಲ್ಲಿ ಎರಡು ಪ್ರತ್ಯೇಕ ವರ್ಷಗಳಲ್ಲಿ ಸ್ಫೋಟಗಳು ಸಂಭವಿಸಿದೆ. 2006ರಲ್ಲಿ ಹಮೀದಿಯಾ ಮಸೀದಿಯಲ್ಲಿ ಸ್ಫೋಟ ನಡೆದಿದೆ. 2008ರಲ್ಲಿ ರಂಜಾನ್ ತಿಂಗಳಲ್ಲಿ ಮಾಲೆಗಾಂವ್‌ನ ಜನನಿಬಿಡ ಪ್ರದೇಶದಲ್ಲಿ ಮೋಟಾರ್ ಸೈಕಲ್‌ಗೆ ಅಳವಡಿಸಿದ್ದ ಬಾಂಬ್ ಸ್ಫೋಟಗೊಂಡಿತ್ತು. 6 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 100 ಜನರು ಗಾಯಗೊಂಡಿದ್ದರು.
ಈ ಪ್ರಕರಣದಲ್ಲಿ ಬಿಜೆಪಿ ನಾಯಕಿ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಆದರೆ 2025ರ ಜುಲೈನಲ್ಲಿ ಈ ಪ್ರಕರಣದ ಎಲ್ಲ ಏಳು ಆರೋಪಿಗಳನ್ನು ಸಹ ಮುಂಬೈ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.





