ಭಾರತದ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ಕುಟುಂಬ ಸಮೇತರಾಗಿ ನಕಲಿ ಬಾಬಾ, ವಂಚಕ ಕಾವೀಧಾರಿ ಧೀರೇಂದ್ರ ಶಾಸ್ತ್ರಿಯನ್ನು ಭೇಟಿ ಮಾಡಿ ಆತನಿಂದ ಶಾಲು ಹಾಕಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಿರುವ ಚಿತ್ರವೊಂದನ್ನು ಅವೇಶ್ ತಿವಾರಿ ಎಂಬ ಎಕ್ಸ್ ಖಾತೆದಾರರು ಶೇರ್ ಮಾಡಿದ್ದಾರೆ. ಬಹಳ ವಿಷಾಧದಿಂದ ಬರೆದಿರುವ ಅವರು, “ಗವಾಯಿ ಅವರು ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದಾಗ ಅದನ್ನು ಅಂಬೇಡ್ಕರ್‌ವಾದದ ವಿಜಯ ಎಂದು ನಾವೆಲ್ಲ ಭಾವಿಸಿದ್ದೆವು. ಆದರೆ, ಈ ಚಿತ್ರ ನೋಡಿದಾಗ ನಾಚಿಕೆಯಾಗುತ್ತಿದೆ. ಅಂಬೇಡ್ಕರ್ ವಾದಿಗಳು ಇಂದಿಗೂ ಪ್ರಾಮಾಣಿಕ ನಾಯಕನನ್ನು ಹೊಂದಿಲ್ಲ. ಯಾರೂ ಬೆನ್ನೆಲುಬು ಹೊಂದಿಲ್ಲ. ಇದು ಸಂಪೂರ್ಣವಾಗಿ ಅಶ್ಲೀಲ ಚಿತ್ರ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆ ಶಿವ ಎನ್ನುವ ಖಾತೆದಾರರು, “ಗವಾಯಿಯಂಥವರು ಏನು ಹೇಳಲು ಬಯಸುತ್ತಾರೆಂದು ದೇವರಿಗೇ ಗೊತ್ತು. ಸಿಜೆಐನಂತಹ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿ ಈ ರೀತಿ ವರ್ತಿಸಿದಾಗ, ಸಾಮಾನ್ಯ ದಲಿತರು ಈ ಹಿಂದುತ್ವ ಪ್ರತಿಪಾದಕರ ವಿರುದ್ಧ ಹೇಗೆ ಹೋರಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
ಪಿ ಕುಮಾರ್ ಎಂಬವರು, “ಖಂಡಿತ, ನನಗೂ ಬಿ.ಆರ್. ಗವಾಯಿಯವರ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಆದರೆ ಅವರು ಕೂಡ ಉಳಿದವರಂತೆ ಕೆಂಪು ವೈನ್ ಕುಡಿಯುವವರು ಮತ್ತು ಅಧಿಕಾರಕ್ಕೆ ಹಂಬಲಿಸುವವರು. ನ್ಯಾಯಮೂರ್ತಿ ಲೋಯಾ ಪ್ರಕರಣದಲ್ಲೂ ಅವರ ಉಪಸ್ಥಿತಿ ಇತ್ತು. ಈ ವಿಶ್ವಾಸಘಾತುಕ ಕಪಟಿಗಳಿಗೆ ಅಡ್ಡಬೀಳುತ್ತಿರುವ ಈ ಜನರಿಗೆ ನಾಚಿಕೆಯಾಗಬೇಕು” ಎಂದು ಕಟು ಟೀಕೆ ಮಾಡಿದ್ದಾರೆ.
ಪ್ರಕಾಶ್ ವಿದ್ರೋಹಿ ಎಂಬ ಖಾತೆದಾರರು, “ಡಾ. ಅಂಬೇಡ್ಕರ್ ಮತ್ತು ಬೌದ್ಧಧರ್ಮದ ಅನುಯಾಯಿ ಎಂದು ಹೇಳಿಕೊಳ್ಳುವ ಮಾಜಿ ಸಿಜೆಐ ಬಿ.ಆರ್. ಗವಾಯಿ ಜಿ ಅವರನ್ನು ಹೈ-ಲೆವೆಲ್ ಮೋಸಗಾರ, ಸುಳ್ಳುಗಾರ ಮತ್ತು ಬಡಾಯಿಗಾರ ಧೀರೇಂದ್ರ ಶಾಸ್ತ್ರಿ ಸನ್ಮಾನಿಸುತ್ತಿರುವುದು ಆಘಾತಕಾರಿ! ಗವಾಯಿ ಜಿ ಅವರ ಆತ್ಮಸಾಕ್ಷಿ ಎಲ್ಲಿಗೆ ಹೋಯಿತು” ಎಂದು ಪ್ರಶ್ನಿಸಿದ್ದಾರೆ.
“ಈ ಸುದ್ದಿ ನೋಡಿ ನನಗೂ ಆಘಾತವಾಯಿತು. ಆ ಶೂ ಎಸೆದ ಘಟನೆಯನ್ನು ನಾನು ಬೆಂಬಲಿಸುವುದಿಲ್ಲ, ಆದರೆ ಈಗ ಆ ವಯಸ್ಸಾದ ವಕೀಲರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ತೋರುತ್ತದೆ. ನನ್ನ ಅಭಿಪ್ರಾಯದಲ್ಲಿ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ; ಸ್ಥಾನ ಮತ್ತು ಸ್ಥಾನಮಾನ ಮಾತ್ರ ಬದಲಾಗಿದೆ ಸಹೋದರ” ಎಂದು ಶಿವ್ ಎಂಬ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ.
ಸನಾತನವಾದಿಯೊಬ್ಬ ಕೋರ್ಟ್ ನಲ್ಲೇ ಶೂ ಎಸೆದು ಅವಮಾನಿಸಿದ್ದ ದಲಿತ ಸಿಜೆಐ ಗವಾಯಿ ಕುಟುಂಬ ಸಮೇತ ಮತ್ತೊಬ್ಬ ಕಟ್ಟರ್ ಸನಾತನವಾದಿ ಧೀರೇಂದ್ರ ಶಾಸ್ತ್ರಿಯಿಂದ ಸನ್ಮಾನ ಮಾಡಿಸಿಕೊಳ್ಳುತ್ತಿರುವ ಈ ಚಿತ್ರ ದುರಂತದ ಕತೆ ಹೇಳುತ್ತದೆ ಅಲ್ಲವೇ? ನಾಗರ ಹೆಡೆಯ ನೆರಳನ್ನು ನಿಜ ನೆರಳೆಂದು ಭ್ರಮಿಸಿ ಅದರ ಅಡಿಗೆ ಕುಪ್ಪಳಿಸುವ ಕಪ್ಪೆಗಳಾಗಿವೆ ಬಹುತೇಕ ದಲಿತ ಸಮುದಾಯಗಳು. ಆದರೆ ಸಿಜೆಐ ಸ್ಥಾನಕ್ಕೇರಿದ ದಲಿತನೇ ನಾಗರ ಹೆಡೆಯನ್ನು ನೆರಳೆಂದು ಭ್ರಮಿಸಿದರೆ, ಸಾಮಾನ್ಯ ದಲಿತರನ್ನು ದೂಷಿಸುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿಸಿದೆ.





