ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಐಟಿ ನಿಮಯಗಳಿಗೆ ಮೋದಿ ಸರ್ಕಾರ ತಂದಿದ್ದ ತಿದ್ದುಪಡಿಗಳಿಗೆ ಬಾಂಬೆ ಹೈಕೋರ್ಟ್ ತಡೆಯೊಡ್ಡಿದೆ.
ಸರ್ಕಾರಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸರ್ಕಾರದ ನಿಯಂತ್ರಣದಲ್ಲಿ ಫ್ಯಾಕ್ಟ್‌ಚೆಕ್ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ಮತ್ತು ಯೂಟ್ಯೂಬರ್‌ಗಳು, ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಐಟಿ ನಿಯಮಗಳಿಗೆ ತಿದ್ದುಪಡಿ ತಂದಿತ್ತು. ತಿಡ್ಡುಪಡಿ ಮಸೂದೆಯನ್ನು ಸಂಪುಟದಲ್ಲಿ ಅಂಗೀಕರಿಸಿತ್ತು. ಆ ಮಸೂದೆಯನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
ಹೈಕೋರ್ಟ್ ಆದೇಶಕ್ಕೆ ಅಭಿನಂದನೆ ಸಲ್ಲಿಸಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್, “ಮೋದಿ ಸರ್ಕಾರವು ಪರ್ಯಾಯ ಮಾಧ್ಯಮವನ್ನು ಮೌನಗೊಳಿಸಲು, ಕಡಿವಾಣ ಹಾಕಲು ಕಠೋರ ಐಟಿ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿತ್ತು. ಬಹುಪಾಲು ಮುಖ್ಯವಾಹಿನಿಯ ಮಾಧ್ಯಮಗಳು ಸರ್ಕಾರದ ಎಂಜಲು ನಾಯಿಗಳಾದಾಗ ಯೂಟ್ಯೂಬರ್‌ಗಳು ನೈಜ ಮಾಧ್ಯಮದ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸುವ ಉದ್ದೇಶವನ್ನು ಈ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾಚರಣ ನಿಯಮಗಳ ತಿದ್ದುಪಡಿ ಮಸೂದೆ ಹೊಂದಿತ್ತು. ಆ ನಿಯಮಗಳನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌ಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.
“ಈ ತೀರ್ಪು ಮೋದಿ ಸರ್ಕಾರವು ಡಿಜಿಟಲ್ ಮಾಧ್ಯಮದಲ್ಲಿನ ವಿಷಯವನ್ನು ನಿಯಂತ್ರಿಸಲು ಅಥವಾ ಸೆನ್ಸಾರ್ ಮಾಡಲು ಜಾರಿಗೆ ತರುತ್ತಿದ್ದ ಕ್ರಮಗಳಿಗೆ ತಡೆಯೊಡ್ಡುತ್ತದೆ. ವಿಶೇಷವಾಗಿ, ಮುಖ್ಯವಾಹಿನಿಯ ನಿರೂಪಣೆಗಳನ್ನು ಟೀಕಿಸುವ ಪರ್ಯಾಯ ಮಾಧ್ಯಮ ಮತ್ತು ಯೂಟ್ಯೂಬರ್‌ಗಳಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ಅವರಿಗೆ ಬೆದರಿಕೆಯೊಡ್ಡುವ ಮಸೂದೆಗೆ ತಡೆಯೊಡ್ಡಿದೆ” ಎಂದು ನೆಟ್ಟಿಗ ಅಫ್ರಿನ್ ಎಂಬವರು ಟ್ವೀಟ್ ಮಾಡಿದ್ದಾರೆ.