ಆನ್‌ಲೈನ್ ಮೂಲಕ ಹೋಟೆಲ್ ರೂಮ್‌ಗಳ ‘ಬುಕಿಂಗ್’ಗಾಗಿ ಹೆಚ್ಚಾಗಿ ಬಳಕೆಯಾಗುವ ರಿತೇಶ್ ಅಗರ್ವಾಲ್ ನೇತೃತ್ವದ ‘OYO ರೂಮ್ಸ್’ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಓಯೋದ ಇತ್ತೀಚಿನ ಜಾಹೀರಾತುಗಳ ವಿರುದ್ಧ ಹಿಂದುತ್ವವಾದಿ ಧಾರ್ಮಿಕ ಗುಂಪುಗಳು ಆಕ್ರೋಶ ವ್ಯಕ್ತಪಡಿಸಿತ್ತಿವೆ. ತಮ್ಮ ಧಾರ್ಮಿಕ ನಂಬಿಕೆಗೆ ಓಯೋ ಜಾಹೀರಾತು ಧಕ್ಕೆ ತಂದಿದೆ ಎಂದು ಆರೋಪಿಸಿವೆ.
ಓಯೋದ ಒಂದು ಜಾಹೀರಾತು ‘ಭಗವಾನ್ ಹರ್ ಜಗ ಹೈ’ (ದೇವರು ಎಲ್ಲೆಡೆ ಇದ್ದಾನೆ) ಎಂಬ ಟ್ಯಾಗ್‌ಲೈನ್ ಅನ್ನು ಹೊಂದಿತ್ತು. ಅದರ ಕೆಳಗೆ, ‘ಔರ್ ಓಯೋ ಭಿ’ (ಮತ್ತು ಓಯೋ ಕೂಡ) ಎಂದು ಬರೆಯಲಾಗಿದೆ. ಎಲ್ಲೆಡೆ ಓಯೋ ರೂಮ್‌ಗಳು ದೊರೆಯುವುದನ್ನು ದೇವರ ಸರ್ವವ್ಯಾಪಿತ್ವಕ್ಕೆ ಹೋಲಿಕೆ ಮಾಡಿರುವುದನ್ನು ಹಿಂದುತ್ವವಾದಿಗಳು ವಿರೋಧಿಸಿದ್ದಾರೆ. ಓಯೋದ ನಡೆಯು ತಮ್ಮ ನಂಬಿಕೆಗೆ ಅವಮಾನಕರ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣದಲ್ಲಿ #BoycottOYO ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
“ಹಿಂದು ನಂಬಿಕೆಯ ಮೇಲೆ ಓಯೋ ದಾಳಿ ಮಾಡಿದೆ! ತಮ್ಮನ್ನು ದೇವರಿಗೆ ಹೋಲಿಸಿಕೊಳ್ಳುವ ಧೈರ್ಯ ಅವರಿಗೆ ಎಲ್ಲಿಂದ ಬಂತು? ಓಯೋ ಸಂಸ್ಥೆ ತಕ್ಷಣ ಕ್ಷಮೆಯಾಚಿಸಬೇಕು. ಈ ಹಾಸ್ಯಾಸ್ಪದ ಜಾಹೀರಾತನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ, ಪ್ರತಿ ನಗರದಲ್ಲಿಯೂ OYO ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಹಿಂದುತ್ವವಾದಿಗಳು ಬೆದರಿಕೆ ಹಾಕಿದ್ದಾರೆ.
Trend Alert 🚨 – #BoycottOYO
— Naresh Vijayvargiya (@INVijayvargiya) February 21, 2025
लोग कहते हैं कि भगवान हर जगह हैं – बस कुछ ऐसे ही हम भी हैं " इन @oyorooms की इतनीं औकात हो गयी कि ये अपनी तुलना भगवान से कर रहे हैं और उसका विज्ञापन भी निकाल रहे हैं , इस विज्ञापन को रद्द करके माफी मांग लो नही तो अंजाम भुगतने को तैयार रहना , इतने… pic.twitter.com/mqZWfy87OU
ಇನ್ನು, ಓಯೋ ಲೋಗೋ ಬಗ್ಗೆ ರಿತೇಶ್ ಅಗರ್ವಾಲ್ ನೀಡಿರುವ ಹೇಳಿಕೆಯು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಓಯೋ ಲೋಗೋ ವಿನ್ಯಾಸದ ಬಗ್ಗೆ ಅವರು ವಿವರಿಸಿದ್ದರು. “OYO ಲೋಗೋವನ್ನು ಜಗನ್ನಾಥ ದೇವರ ಪ್ರತಿಮಾರೂಪದ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಲೋಗೋದಲ್ಲಿರುವ ಎರಡು ‘O’ಗಳು ಜಗನ್ನಾಥನ ಕಣ್ಣುಗಳನ್ನು ಪ್ರತಿನಿಧಿಸುತ್ತವೆ ಮತ್ತು ‘Y’ ಮೂಗಿನ ಸಂಕೇತವಾಗಿದೆ” ಎಂದು ಹೇಳಿದ್ದರು.