ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ಪೀಠವು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ವರದಿ ಕೇಳಿದೆ.
ಈ ವಿಚಾರದಲ್ಲಿ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ನೆರವನ್ನು ಸುಪ್ರೀಂ ಕೋರ್ಟ್ ಕೋರಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು
“ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮಾಡಿದ ಕೆಲವು ಕಾಮೆಂಟ್‌ಗಳ ಬಗ್ಗೆ ನಮ್ಮ ಗಮನ ಸೆಳೆಯಲಾಗಿದೆ. ನಮಗೆ ಸಹಾಯ ಮಾಡಲು ನಾವು ಎಜಿ ಮತ್ತು ಎಸ್‌ಜಿ ಅವರನ್ನು ಕೇಳಿದ್ದೇವೆ. ಈ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಾವು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರನ್ನು ಕೇಳುತ್ತೇವೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಆಡಳಿತಾತ್ಮಕ ನಿರ್ದೇಶನಗಳನ್ನು ಕೋರಿದ ನಂತರ ಈ ಪ್ರಕರಣವನ್ನು 2 ವಾರಗಳಲ್ಲಿ ಕೈಗೊಳ್ಳಬಹುದು” ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಇತ್ತೀಚೆಗೆ, ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರ ಎರಡು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಅದರಲ್ಲಿ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಒಂದು ವಿಡಿಯೋದಲ್ಲಿ ಅವರು ಬೆಂಗಳೂರಿನ ಪ್ರದೇಶವನ್ನು ‘ಪಾಕಿಸ್ತಾನ’ ಎಂದು ಉಲ್ಲೇಖಿಸುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ಅವರು ಮಹಿಳಾ ವಕೀಲರಿಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
