ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಆತನ ಪುತ್ರ ಕರಣ್ ಹೆಸರನ್ನು ಆಗಸ್ಟ್ 12 ರಂದು ನಡೆಯುವ ಚುನಾವಣಾ ಕಣದಿಂದ ಕುಸ್ತಿ ಫೆಡರೇಷನ್ ಕೈಬಿಟ್ಟಿದೆ.
ಚುನಾವಣಾ ಅಧಿಕಾರಿ, ನಿವೃತ್ತ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರು ಅರ್ಹ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಉತ್ತರ ಪ್ರದೇಶ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿರುವ ಅವರ ಕಿರಿಯ ಪುತ್ರ ಕರಣ್ ಅವರ ಹೆಸರು ಅಂತಿಮ ಪಟ್ಟಿಯಲ್ಲಿಲ್ಲ.
ರಾಜ್ಯ ಸಂಘವನ್ನು ಪ್ರತಿನಿಧಿಸಬೇಕಿದ್ದ ಇವರಿಬ್ಬರ ಬದಲು ಪ್ರೇಮ್ ಕುಮಾರ್ ಮಿಶ್ರಾ ಮತ್ತು ಸಂಜಯ್ ಸಿಂಗ್ ಮತದಾನ ಮಾಡಲಿದ್ದಾರೆ. ಕಳಂಕಿತ ಅಧ್ಯಕ್ಷ ಹಾಗೂ ಅವರ ಪುತ್ರನನ್ನು ಚುನಾವಣಾ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆದರೆ ಬಿಹಾರ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬ್ರಿಜ್ ಭೂಷಣ್ ಅವರ ಅಳಿಯ ವಿಶಾಲ ಪ್ರತಾಪ್ ಸಿಂಗ್ ಹೆಸರು ಪಟ್ಟಿಯಲ್ಲಿದೆ. ರಾಜ್ಯದ ಪರವಾಗಿ ವಿನಯ್ ಕುಮಾರ್ ಸಿಂಗ್ ಜತೆ ವಿಶಾಲ್ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಬ್ರಿಜ್ ಭೂಷಣ್ ಅವರ ಹುದ್ದೆಗೆ ಈ ಇಬ್ಬರು ಉತ್ತರಾಧಿಕಾರಿಗಳಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ? ಮಳೆಯಿಂದ ಡ್ರಾನಲ್ಲಿ ಅಂತ್ಯವಾದ ಎರಡನೇ ಟೆಸ್ಟ್; ಭಾರತಕ್ಕೆ ಸರಣಿ ಜಯ
2023 ರಿಂದ 2026ರ ಅವಧಿಯ ಪದಾಧಿಕಾರಿ ಹುದ್ದೆಗಳಿಗೆ ಸ್ಪರ್ಧಿಸಲು ಅರ್ಹತೆ ಪಡೆದವರ ಪಟ್ಟಿಯಲ್ಲಿ ರೈಲ್ವೆ ಕ್ರೀಡಾ ಉತ್ತೇಜನ ಮಂಡಳಿಯ ಕಾರ್ಯದರ್ಶಿ ಪ್ರೇಮ್ ಚಂದ ಲೊಚಾಬ್ ಅವರ ಹೆಸರು ಕೂಡ ಇದೆ. ಹರ್ಯಾಣ ಹಾಗೂ ರಾಜಸ್ಥಾನದ ಜಾಟ್ ಸಮುದಾಯದ ಮೇಲೆ ಉತ್ತಮ ನಿಯಂತ್ರಣ ಹೊಂದಿರುವ ಇವರು ಗುಜರಾತ್ನಿಂದ ಐ ಡಿ ನಾನಾವತಿ ಜತೆ ಜತೆ ಮತ ಚಲಾಯಿಸುವ ಅಧಿಕಾರ ಪಡೆದಿದ್ದಾರೆ. ನಾನಾವತಿ ಅವರು ಬ್ರಿಜ್ ಬೆಂಬಲಿಗರಾಗಿದ್ದು, ಗುಜರಾತ್ ರಾಜ್ಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ 25 ರಾಜ್ಯ ಘಟಕಗಳಿಂದ ಒಟ್ಟು 50 ಸದಸ್ಯರನ್ನು ಹೊಂದಿದೆ. ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲು ಇದೇ ಆಗಸ್ಟ್ 1 ಕೊನೆಯ ದಿನಾಂಕವಾಗಿದೆ. ಮರುದಿನ ನಾಮಪತ್ರಗಳ ಪರಿಶೀಲನೆ ನಡೆಸಿ, ಆಗಸ್ಟ್ 7 ರಂದು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಅಗತ್ಯವಿದ್ದಲ್ಲಿ ಆಗಸ್ಟ್ 12 ರಂದು ಮತದಾನ ನಡೆಯಲಿದೆ.